ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 18
ತುಂಗಭದ್ರಾ ನದಿಮೂಲ, ಮಲೆನಾಡು ಪ್ರದೇಶ ಹಾಗೂ ಡ್ಯಾಂ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಎರಡನೇ ಬೆಳೆಗೆ ನೀರು ಪಕ್ಕಾ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.
ಕಳೆದ ಬಾರಿ ಮಳೆ ಕೊರತೆಯಿಂದ ಒಂದೇ ಬೆಳೆಗೆ ತೃಪ್ತಿಪಟ್ಟುಕೊಂಡಿದ್ದರು. ಬರಗಾಲದಿಂದಾಗಿ ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ಉಂಟಾಗಿತ್ತು. ಹೀಗಾಗಿ ಡ್ಯಾಂನಲ್ಲಿದ್ದ ಅಲ್ಪ ಪ್ರಮಾಣದ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ರಾಯಚೂರು, ಕೊಪ್ಪಳ ಜಿಲ್ಲೆಗಳ ಜನರ ಹಿತದೃಷ್ಟಿಯಿಂದ ಎರಡು ಬಾರಿ ನಾಲೆಗೆ ಹರಿಸಲಾಗಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಹವಾಮಾನ ಬದಲಾಗಿದ್ದು, ಎಲ್ಲೆಡೆ ಉತ್ತಮ ಮಳೆ ಸುರಿಯುತ್ತಿದೆ. ಇದರಿಂದ ಡ್ಯಾಂ ಹಲವು ದಿನಗಳ ಹಿಂದೆಯೇ ಭರ್ತಿಯಾಗಿದ್ದು, ಒಳಹರಿವೂ ಹೆಚ್ಚಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಆಗಸ್ಟ್ 11, 2024ರ ದುರಂತ !
ದಿನಾಂಕ: 11-08-2024 ಶನಿವಾರ ರಾತ್ರಿ 11.30ರ ಸುಮಾರು ತುಂಗಭದ್ರಾ ಡ್ಯಾಂನ 19ನೇ ಗೇಟ್‌ನ ಚೈನ್‌ಲಿಂಕ್ ತುಂಡಾದ ಪರಿಣಾಮ, ಗೇಟ್ ನೀರಿನ ರಭಸಕ್ಕೆ ಕೊಚ್ಚಿಹೋಗಿ ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ತದನಂತರ ಹರಸಾಹಸಪಟ್ಟು ಗೇಟ್ ಅಳವಡಿಸಲಾಗಿತ್ತು. ಅಷ್ಟೊತ್ತಿಗೆ ಸಾಕಷ್ಟು ಟಿಎಂಸಿ ನೀರು ನದಿಗೆ ಹರಿದುಹೋಗಿತ್ತು. ಇಷ್ಟರ ನಡುವೆಯೂ ಪುನಃ ಡ್ಯಾಂ ಭರ್ತಿಯಾಗಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೆಪ್ಟೆಂಬರ್ 22ರಂದು ಬಾಗೀನ ಅರ್ಪಿಸಿದ್ದರು.
ತಿಂಗಳಲ್ಲಿ ಭತ್ತದ ಫಸಲು ಕೈಗೆ
ಅಕ್ಟೋಬರ್ ತಿಂಗಳಲ್ಲಿ ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಡ್ಯಾಂ ಈಗಾಗಲೇ ಭರ್ತಿಯಾಗಿದೆ. ಅಲ್ಲದೇ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಅಂದಾಜು ನವೆಂಬರ್ ಕೊನೆಯ ವಾರ ಇಲ್ಲವೇ ಡಿಸೆಂಬರ್ ಮೊದಲ ವಾರದಲ್ಲಿ ಭತ್ತದ ಫಸಲು ಕೊಯ್ಲು ಹಂತಕ್ಕೆ ಬರಲಿದ್ದು, ಡ್ಯಾಂ ಭರ್ತಿಯಾಗಿರುವುದರಿಂದ ಎರಡನೇ ಬೆಳೆಗೆ ನೀರು ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರೈತರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡ್ಯಾಂ ಭರ್ತಿಗೊಳಿಸಲು ಸಿಂಧನೂರು ಶಾಸಕರ ದನಿ
ಡ್ಯಾಂ ಈಗಾಗಲೇ 101 ಟಿಎಂಸಿ ಭರ್ತಿಯಾಗಿದೆ. ಇನ್ನೂ 4 ಟಿಎಂಸಿ ನೀರನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಡ್ಯಾಂ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಪ್ರತಿಬಾರಿ ಬೇಸಿಗೆ ಬೆಳೆಗೆ 3 ರಿಂದ 4 ಟಿಎಂಸಿ ನೀರು ಕೊರತೆಯಾಗಿ ರೈತರು ಸಮಸ್ಯೆ ಅನುಭವಿಸುವಂತಾಗುತ್ತದೆ. ಹಾಗಾಗಿ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಆದಷ್ಟು ಡ್ಯಾಂ ಸಂಪೂರ್ಣ ಭರ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಡ್ಯಾಂ ಭರ್ತಿ, ರೈತರಲ್ಲಿ ಸಂತಸ
ಆಗಸ್ಟ್ 11ರಂದು ಡ್ಯಾಂನ 19ನೇ ಗೇಟ್ ಕೊಚ್ಚಿಹೋಗಿ ಅಪಾರ ಪ್ರಮಾಣದ ನೀರು ನದಿಗೆ ಹರಿದುಹೋಗಿದ್ದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ರೈತರು, ಮಳೆರಾಯ ಮತ್ತು ಪ್ರಕೃತಿಯ ಕೃಪೆಯಿಂದ ಪುನಃ ಡ್ಯಾಂ ಭರ್ತಿಯಾಗಿದ್ದರಿಂದ ಸಂತಸದಲ್ಲಿದ್ದಾರೆ. ಡ್ಯಾಂಗೆ ಒಳಹರಿವು ಹೆಚ್ಚಿರುವುದೂ ಸಹ ಅವರ ಖುಷಿಗೆ ಕಾರಣವಾಗಿದೆ. ಎರಡು ಬೆಳೆ ಆದರೆ ನಾಲ್ಕು ಜಿಲ್ಲೆಗಳ ವ್ಯಾಪಾರ-ವಹಿವಾಟು ಸೇರಿದಂತೆ ಆರ್ಥಿಕ ವ್ಯವಹಾರಗಳಿಗೆ ಬಹಳಷ್ಟು ಉತ್ತೇಜನ ದೊರೆಯಲಿದೆ ಎಂಬುದು ತಜ್ಞರ ಅಭಿಪ್ರಾಯ.