ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ಸಿಂಧನೂರು.ಮಾರ್ಚ್ 29
ನಗರದ ಪಾಟೀಲ್ ಮಹಿಳಾ ವಿದ್ಯಾಲಯ ಹಾಗೂ ರಿಚ್ ಮಚ್ ಹೈಯರ್ ಅಕಾಡೆಮಿಕ್ ಫೌಂಡೇಶನ್ ಬೆಂಗಳೂರು ಸಹಯೋಗದಲ್ಲಿ, ಕಾಲೇಜಿನಲ್ಲಿ ಮಹಿಳೆಯರು ಹಾಗೂ ಯುವತಿಯರಿಗೆ 45 ದಿನಗಳ ಕಾಲ ಹಮ್ಮಿಕೊಂಡಿದ್ದ ಬ್ಯೂಟಿಷಿಯನ್ ತರಬೇತಿ ಶಿಬಿರದಲ್ಲಿ ಭಾಗವಹಿಸಿದ 25 ಶಿಬಿರಾರ್ಥಿಗಳಿಗೆ ಶುಕ್ರವಾರ ಉಚಿತವಾಗಿ ಬ್ಯೂಟಿಷಯನ್ ಕಿಟ್ ವಿತರಿಸಲಾಯಿತು.

ತರಬೇತಿ ಶಿಬಿರ ಸಮಾರೋಪದಲ್ಲಿ ಮಾತನಾಡಿದ ಮುನಿರಾಬಾದ್-ಮಹೆಬೂಬ್‌ನಗರ ರೈಲ್ವೆ ನಿರ್ಮಾಣ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ಶ್ರುತಿ ಅವರು, ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಉನ್ನತ ಸಾಧನೆಗೆ ಛಲ ತೊಡುವ ಮೂಲಕ ಸಾಧಿಸಿ ತೋರಿಸಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಯುವತಿಯರು ಅಪ್ರತಿಮ ಸಾಧನೆ ತೋರುವ ಮೂಲಕ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ. ಕೀಳರಿಮೆ ಮನೋಭಾವ ತೊರೆದು ಗುರಿ ಸಾಧನೆಗೆ ಯಾರು ಪ್ರಾಮಾಣಿಕವಾಗಿ ಪ್ರಯತ್ನಪಡುತ್ತಾರೋ ಅವರಿಗೆ ಯಶಸ್ಸು ಒಲಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಆರ್.ಪಂಪಾಪತಿ ಪಾಟೀಲ್ ಅಲಬನೂರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶರಣಬಸವ ವಕೀಲರು, ಕಾಲೇಜು ಆಡಳಿತ ಅಧಿಕಾರಿ ಭಾರತಿಕೃಷ್ಣ ನೆಕ್ಕಂಟಿ, ಪ್ರಾಚಾರ್ಯ ಮಾರುತಿ ಭಂಡಾರ್‌ಕರ್, ಸಂಪನ್ಮೂಲ ವ್ಯಕ್ತಿ ಶಾಹೀನ್ ಇದ್ದರು.