ನಮ್ಮ ಸಿಂಧನೂರು, ಅಕ್ಟೋಬರ್ 10
ಜೀವನದ ಸವಾಲುಗಳನ್ನು ಸಮಾನಚಿತ್ತದಿಂದ ಎದುರಿಸಬೇಕು. ಏಳು-ಬೀಳುಗಳಿಗೆ ಕುಗ್ಗದೇ, ಯಾವುದೇ ರೀತಿಯ ಖಿನ್ನತೆಗೆ ಒಳಗಾಗದೇ ಜೀವಿಸುವ ಮಾರ್ಗೋಪಾಯಗಳನ್ನು ಆಯಾ ಸಂದರ್ಭದಲ್ಲಿ ಕಂಡುಕೊಳ್ಳಬೇಕು ಎಂದು ಜೆ.ಎಂ.ಎಫ್.ಸಿ. ಸಿಂಧನೂರಿನ ಅಪರ ಸಿವಿಲ್ ನ್ಯಾಯಾಧೀಶರಾದ ಅಚ್ಚಪ್ಪ ದೊಡ್ಡಬಸವರಾಜ್ ಅವರು ಹೇಳಿದರು.
ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಸನ್ ರೈಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆರೋಗ್ಯ ಇಲಾಖೆ ಹಾಗೂ ತಾಲೂಕು ನ್ಯಾಯವಾದಿಗಳ ಸಂಘ ಹಮ್ಮಿಕೊಂಡಿದ್ದ, ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ, ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಹಾಗೂ ಹಾಗೂ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

“ಸಮಾಜದಲ್ಲಿ ತಲೆಯೆತ್ತಿ ಜೀವಿಸಬೇಕಾದರೆ ಪುಸ್ತಕಗಳಿಗೆ ತಲೆಬಾಗಿ ಓದುವುದನ್ನ ಕಲಿತುಕೊಳ್ಳಬೇಕು”
ಮುಖ್ಯ ಅತಿಥಿಗಳು ಹಾಗೂ ಜೆ.ಎಂ.ಎಫ್.ಸಿ. ಸಿಂಧನೂರಿನ 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ರೂಪಾ.ಸಿ.ವಗ್ಗಾ ಅವರು ಮಾತನಾಡಿ. “ಜೀವನ ಒಂದು ಸುಂದರ ಗುಲಾಬಿ ಹೂ ಇದ್ದ ಹಾಗೆ. ಗುಲಾಬಿ ಹೂವು ಮುಳ್ಳು ಮತ್ತು ಹೂವು ಎರಡನ್ನೂ ಹೊಂದಿರುತ್ತದೆ. ಹಾಗೆಯೇ ಜೀವನದಲ್ಲಿ ಸೋಲು-ಗೆಲುವು ಸಾಮಾನ್ಯ. ಎರಡನ್ನೂ ಸಮಾನವಾಗಿ ಸ್ವೀಕರಿಸಿ ಮುಂದೆ ಸಾಗಿಸಬೇಕು. ಸಮಾಜದಲ್ಲಿ ತಲೆಯೆತ್ತಿ ಜೀವಿಸಬೇಕಾದರೆ ಪುಸ್ತಕಗಳಿಗೆ ತಲೆಬಾಗಿ ಓದುವುದನ್ನ ಕಲಿತುಕೊಳ್ಳಬೇಕು. ಮೊಬೈಲ್ಗೆ ತಲೆ ಬಾಗಿದರೆ ಅದು ನಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡುವುದಿಲ್ಲ. ಆದ್ದರಿಂದ ಜೀವನದಲ್ಲಿ ನಮ್ಮ ಹೆಸರು ಚಿರಶಾಶ್ವತ ಆಗಬೇಕಾದರೆ ಶಿಸ್ತು ಮತ್ತು ವಿದ್ಯೆ ಅತಿ ಮುಖ್ಯ” ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಖಿನ್ನತೆ, ಒತ್ತಡ ಮುಂತಾದ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಗಣನೀಯವಾಗಿ ಹೆಚ್ಚುತ್ತಿವೆ. ಬದಲಾಗುತ್ತಿರುವ ಜೀವನಶೈಲಿಯ ನಡುವೆ ಮಾನಸಿಕ ಆರೋಗ್ಯ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಹಾಗಾಗಿ ಮಾನಸಿಕ ಆರೋಗ್ಯದ ಮಹತ್ವವನ್ನು ಜನರಿಗೆ ತಿಳಿಸಲು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಮೊದಲ ಬಾರಿಗೆ ಅಕ್ಟೋಬರ್ 10, 1992 ರಂದು ವರ್ಲ್ಡ್ ಫೆಡರೇಶನ್ ಫಾರ್ ಮೆಂಟಲ್ ಹೆಲ್ತ್ ಆಯೋಜಿಸಿತು. ಇದು 150 ಕ್ಕೂ ಹೆಚ್ಚು ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಜಾಗತಿಕ ಮಾನಸಿಕ ಆರೋಗ್ಯ ಸಂಸ್ಥೆಯಾಗಿದೆ” ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ ಅನಿಸಿಕೆ ವ್ಯಕ್ತಪಡಿಸಿದರು.

ಅತಿಥಿಗಳಿಗೆ ಸನ್ಮಾನ
ಕಾರ್ಯಕ್ರಮಕ್ಕೆ ಆಗಮಿಸಿದ ಜೆ.ಎಂ.ಎಫ್.ಸಿ. ಸಿಂಧನೂರಿನ ಅಪರ ಸಿವಿಲ್ ನ್ಯಾಯಾಧೀಶರಾದ ಅಚ್ಚಪ್ಪ ದೊಡ್ಡಬಸವರಾಜ್, 2ನೇ ಅಪರ ಸಿವಿಲ್ ನ್ಯಾಯಾಧೀಶರಾದ ರೂಪಾ.ಸಿ.ವಗ್ಗಾ, ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಖಚಾಂಚಿ ಕೆ.ಶರಣಬಸವ ಉಮಲೂಟಿ, ಖಾಜಿಮಲಿಕ್ ವಕೀಲ ಅವರನ್ನು ಸನ್ಮಾನಿಸಲಾಯಿತು. ಸನ್ ರೈಸ್ ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್.ಕೆ, ಸದಸ್ಯ ಆಸಿಫ್, ನರ್ಸಿಂಗ್ ವಿಭಾಗದ ಪ್ರಾಚಾರ್ಯರಾದ ಲಾಜರ ಸಿರಿಲ್, ಫಾರ್ಮಸಿ ವಿಭಾಗದ ವಾಸೀಮ್ ಹುಸೇನ್, ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಚಕ್ರವರ್ತಿ.ಡಿ, ಉಪನ್ಯಾಸಕರಾದ ಬಸವಲಿಂಗ.ಡಿ, ಅಶುಪಾಷಾ, ರಾಜೇಶ್, ಭಾಗ್ಯಶ್ರೀ, ಶೋಭಾ, ಸಂತೋಷಿ, ಸಾಗರ್, ಯಾಸೀನ್, ನಿರ್ಮಲ, ಅಖಿಲಾ, ಲಿಸಿ ಜಾನ್, ಮನೋಹರ್ ಬಡಿಗೇರ್ ಮೈಲಾಪುರ, ಸೈಯದ್ ಮೂಸಾ, ಪುಟ್ಟರಾಜು, ಮನೋಹರಿ, ಶರಣಮ್ಮ, ನಾಗರತ್ನ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.