ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಆಗಸ್ಟ್ 22
ಹೈಬ್ರೀಡ್ ಜೋಳದ ಬೀಜಕ್ಕಾಗಿ ರೈತರು ಕಳೆದೊಂದು ವಾರದಿಂದ ಪರದಾಡುತ್ತಿದ್ದು, ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಅಮರದೀಪ ಬಟ್ಟೆ ಅಂಗಡಿ ಪಕ್ಕದ ಬೀಜ ಮಾರಾಟದ ಖಾಸಗಿ ಅಂಗಡಿಯೊಂದಕ್ಕೆ ಮುಗಿಬಿದ್ದದ್ದು ಗುರುವಾರ ಬೆಳಿಗ್ಗೆ ಕಂಡುಬಂತು. ಬೀಜಕ್ಕಾಗಿ ರೈತರು ಬೆಳಿಗ್ಗೆಯಿಂದಲೇ ಅಂಗಡಿ ಮುಂದೆಯೇ ಕಾಯುತ್ತಿದ್ದಾರೆ.
ಹೈಟೆಕ್ ಕಂಪನಿಯ 3201 ನಂಬರಿನ ಹೈಬ್ರೀಡ್ ಜೋಳದ ಬೀಜಕ್ಕೆ ಬೇಡಿಕೆ ಹೆಚ್ಚಿದ್ದು, ರೈತರು ಈ ತಳಿಯ ಬೀಜಕ್ಕಾಗಿ ಖಾಸಗಿ ಬೀಜ ಮಾರಾಟ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಲಾರಿಯಲ್ಲಿ ಲೋಡು ಬರುತ್ತಿದ್ದಂತೆ ಬೀಜ ಖಾಲಿಯಾಗುತ್ತಿದ್ದು, ಬಹಳಷ್ಟು ರೈತರು ಬೀಜದ ಕೊರತೆ ಎದುರಿಸುತ್ತಿದ್ದಾರೆ. ಉತ್ತಮ ಮಳೆಯಾಗಿದ್ದು, ರೈತರು ಹೊಲವನ್ನು ಹದಗೊಳಿಸಿ ಬಿತ್ತನೆಗಾಗಿ ತುದಿಗಾಲಲ್ಲಿ ನಿಂತಿದ್ದು, ಆದರೆ ಅವರು ಬಯಸಿ ಬೀಜದ ಕೊರತೆ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ.
“ಇಳುವರಿ ಜಾಸ್ತಿ ಬರ್ತೈತಂತ ಎಲ್ರೂ ಅದ್ಕ ಗಂಟ ಬಿದ್ದಾರ”
ಮಾರುಕಟ್ಟೆಯಲ್ಲಿ ಹೈಬ್ರೀಡ್ ಬೀಜದ ಹಲವು ತಳಿಗಳಿದ್ದರೂ ರೈತರು ತಾವು ಬಯಸಿದ ಬೀಜಕ್ಕಾಗಿ ಹಾತೊರೆಯುತ್ತಿದ್ದಾರೆ. “ಹೈಟೆಕ್ 3201 ತಳಿ ಹೈಬ್ರೀಡ್ ತಳಿ ಇಳುವರಿ ಜಾಸ್ತಿ ಬರ್ತೈತಿ. ಅಂಗಾಗಿ ಎಲ್ರೂ ಇದಕ್ಕ ಗಂಟ ಬಿದ್ದಾರ. ರೊಕ್ಕಾ ಕೊಡ್ತೀವಿ ಅಂದ್ರೂ ಬೀಜ ಸಿಗವಲ್ವು. ಎರ‍್ಡು ವಾರ ಆಯ್ತು ಆ ಅಂಗಡಿ.. ಈ ಅಂಗಡಿ.. ಅಡ್ಡಾಡದ ಆಗೇತಿ. ಕೇಳಿದ್ದ ಬೀಜ ಸಿಗಲರ‍್ದಂತದ್ರಗ ಏನು ಬಿತ್ತಬೇಕ್ರಿ ಹೊಲದಾಗ. ಇನ್ನೂ ಕೆಲವ್ರು ಬೀಜ ತರಾಕಂತ ಬಳ್ಳಾರಿ, ಸಿರುಗುಪ್ಪಕ್ಕ ಅಡ್ಡಾಡಕತ್ತ್ಯಾರ” ಎಂದು ರೈತರೊಬ್ಬರು ತಿಳಿಸಿದರು.
“ಆರ್‌ಎಸ್‌ಕೆದಾಗ ಬೀಜ ಸಿಗಂಗಿದ್ರ ರೈತ್ರಿಗೆ ಈ ಪರಿಸ್ಥಿತಿ ಬರ‍್ತಿರ‍್ಲರ‍್ರಿ”
“ರೈತ ಸಂಪರ್ಕ ಕೇಂದ್ರದಾಗ ಜೋಳದ ಚಲೋ ಜೋಳದ ಬೀಜ ಸಿಕ್ಕಿದ್ರ ರೈತ್ರಿಗೆ ಅಲೆದಾಡೋ ಪರಿಸ್ಥಿತಿ ಬರ‍್ತಿರ‍್ಲರ‍್ರಿ. ಬಿತ್ತಬೇಕು ಅಂದ್ರು ರೈತ್ರು ಬೀಜದ ಸಲುವಾಗಿ ಚಪ್ಲಿ ಹರೆಂಗ ತಿರುಗಾಡಬೇಕಾಗೈತಿ. ನಮ್ಮ ಅಡಿವಿ ಕೊನೆ ಭಾಗದಾಗ ಅದ್ಯಾವ, ಅಂಗಾಗಿ ಹೈಬ್ರೀಡ್ ಜೋಳಾನ ಬಿತಿಗೆಂತ ಬಂದೀವಿ, ಒಂದು ವಾರದಿಂದ ಬೀಜದ ಸಲುವಾಗಿ ಅಡ್ಡಾಡಕತ್ತೀವಿ. ನಾವ್ ಕೇಳಿದ್ ಬೀಜ ಸಿಗವಲ್ವು. ಅಂಗಡೇರು ನಾಳೆ ಬರ್ರಿ, ನಾಡದ್ ಬರ್ರಿ ಬೀಜ ಖಾಳಿ ಆಗ್ಯಾವ ಅಂತಾರ” ಎಂದು ಮತ್ತೊಬ್ಬ ರೈತರು ನೊಂದು ನುಡಿದರು.