ಸಿಂಧನೂರು: ‘ದಸರಾ ಉತ್ಸವಕ್ಕಿದ್ದಷ್ಟು ಉತ್ಸಾಹ, ಅಭಿವೃದ್ಧಿಗಿಲ್ಲ ?’: ಸಾರ್ವಜನಿಕರ ಪ್ರಶ್ನೆ

Spread the love

ಉತ್ಸವ, ಅಭಿನಂದನಾ ಸಮಾರಂಭ, ಸಂತೋಷಕೂಟ ಮಾಡುತ್ತ ಹೋದರೆ ನಮ್ಮ ಸಮಸ್ಯೆ ಕೇಳರ‍್ಯಾರು: ಸಾರ್ವಜನಿಕರ ಪ್ರಶ್ನೆ ?
* * * * * * * * * * * * * * * * * * * * * * * * *
ಸ್ಷೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 28

‘ನಗರ ಹಾಗೂ ತಾಲೂಕಿನಲ್ಲಿ ಡಜನ್‌ಗಟ್ಟಲೇ ಸಮಸ್ಯೆಗಳಿವೆ. ದಸರಾ ಉತ್ಸವ ಮುಗಿದ ನಂತರವಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಸಮಸ್ಯೆ, ಅಹವಾಲುಗಳಿಗೆ ಸ್ಪಂದಿಸಲು ಚುರುಕಿನಿಂದ ಮುಂದಾಗುತ್ತಾರೆ ಎಂದು ತಿಳಿದುಕೊಂಡಿದ್ದೆವು. ಆದರೆ ದಸರಾ ಉತ್ಸವ ಮುಗಿದಿದ್ದೇ ತಡ, ಅದರ ನೆಪದಲ್ಲಿ ಪುನಃ ಖಾಸಗಿ ಗಾರ್ಡನ್‌ವೊಂದರಲ್ಲಿ ಅಭಿನಂದನಾ ಸಮಾರಂಭ ಮಾಡಲು ಹೊರಟಿರುವುದು ನೋಡಿದರೆ, ಇನ್ನು ಕೆಲ ದಿನಗಳ ನಂತರ ಇದೇ ನೆಪದಲ್ಲಿ ಸಂತೋಷ ಕೂಟ ಏರ್ಪಡಿಸಿದರೂ ಅಚ್ಚರಿಯೇನಿಲ್ಲ’ ಎಂದು ನಗರದ ನಾಗರಿಕರೊಬ್ಬರು ಆಕ್ಷೇಪ ಎತ್ತಿದ್ದಾರೆ.
“ಸಿಂಧನೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಚರಿಸಿದ್ದೇನು ಹೆಮ್ಮೆಯ ವಿಷಯ. ವಾಣಿಜ್ಯ ನಗರಿಯನ್ನು ಕಲಾ ತೋರಣದಂತೆ ಸಿಂಗರಿಸಿ, ಸಾಂಸ್ಕೃತಿಕ ವಾತಾವರಣ ನಿರ್ಮಿಸಿದ್ದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಉತ್ಸವಕ್ಕೆ ಇದ್ದಷ್ಟು ಉತ್ಸಾಹ, ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಾಳದೇ ಇರುವುದು ನೋಡಿದರೆ, ಜನರ ಸಹನೆಯನ್ನು ಇವರು ಪರೀಕ್ಷಿಸಿದಂತಿದೆ” ಎಂದು ಮತ್ತೊಬ್ಬ ಸಾರ್ವಜನಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಏಕಪಕ್ಷ, ಜನರೇ ಪ್ರತಿಪಕ್ಷ
“ದಸರಾ ಉತ್ಸವದ ಹೆಸರಿನಲ್ಲಿ ಕೆಲವರು ಫ್ರೀ ಪ್ರಚಾರಕ್ಕೆ ಮುಂದಾಗಿದ್ದಾರೆ. ಯಾವುದೇ ಆಡಳಿತ ಪಕ್ಷವಿರಲಿ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸುವುದು ಪ್ರತಿಪಕ್ಷಗಳ ಕೆಲಸ. ಆದರೆ, ಕೆಲವು ತಿಂಗಳುಗಳಿಂದ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಪಕ್ಷಗಳು ಆಡಳಿತ ಪಕ್ಷಕ್ಕೆ ಜೈಕಾರ ಹಾಕುವುದರಲ್ಲಿ ನಾ ಮುಂದು, ತಾ ಮುಂದು ಎಂದು ಪೈಪೋಟಿಗಿಳಿದಂತೆ ಕಾಣುತ್ತಿದೆ. ಹೀಗಾಗಿ ತಾಲೂಕಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಕ್ಷರಶಃ ಏಕ ಪಕ್ಷದಂತೆ ವರ್ತಿಸುತ್ತಿದ್ದು, ಜನರು ಮತ್ತು ಜನಪರ ಸಂಘಟನೆಗಳೇ ಪ್ರತಿಪಕ್ಷಗಳಾಗಿದ್ದಾರೆ. ಉತ್ಸವದ ನಂತರವೂ ಜನರ ಸಮಸ್ಯೆಗಳನ್ನು ಕಡೆಗಣನೆ ಮಾಡಿರುವುದು ನಿಜಕ್ಕೂ ಖೇದಕರ ವಿಷಯ. ಇದೇ ರೀತಿ ಮುಂದುವರಿದರೆ, ಜನರು ಬೀದಿಯಲ್ಲಿ ಪ್ರಶ್ನಿಸುವುದು ಶತಸಿದ್ಧ” ಎಂದು ಕಾರ್ಮಿಕ ಸಂಘಟನೆಯ ಮುಖಂಡರು ಹೇಳುತ್ತಾರೆ.
ಸಹಬಾಳ್ವೆ ಸಂದೇಶ ಸಾರಿದ ದಸರಾ
“ಈ ಬಾರಿಯ ದಸರಾ ಉತ್ಸವವು ಸಮಗ್ರ ಸಿಂಧನೂರು ತಾಲೂಕಿನ ಜನರ ಸಹಬಾಳ್ವೆಯ ಧ್ಯೂತಕವಾಗಿತ್ತು. ಸರ್ವ ಸಮುದಾಯಗಳು ಭಾಗವಹಿಸಿ, ಹಬ್ಬದಲ್ಲಿ ಸಂತಸಪಟ್ಟಿದ್ದು ವಿಶೇಷವಾಗಿತ್ತು. ಕಲಾ ತಂಡಗಳ ಮೆರವಣಿಗೆ, ರೈತ ದಸರಾ, ಮಹಿಳಾ ದಸರಾ, ಅಕ್ಷರ, ಆರೋಗ್ಯ, ನೌಕರ, ಕಲಾ ಹಾಗೂ ಯುವ ದಸರಾ ತಾಲೂಕಿನ ನಾಗರಿಕರಿಗೆ ಮುದ ನೀಡಿದ್ದಲ್ಲದೇ, ಹರ್ಷೋಲ್ಲಾಸಕ್ಕೆ ಕಾರಣವಾಯಿತು. ಭತ್ತದ ಕಣಜ ಖ್ಯಾತಿಯ ಸಿಂಧನೂರು, ಸಾಂಸ್ಕೃತಿಕವಾಗಿಯೂ ತನ್ನದೇ ಆದ ವೈಶಿಷ್ಟತೆ ಹೊಂದಿದೆ ಎನ್ನುವುದನ್ನು ಮೈಸೂರು ದಸರಾ ಮಾದರಿಯ ಉತ್ಸವ ಸಾಬೀತುಪಡಿಸಿದೆ” ಸ್ಥಳೀಯ ಮಹಿಳಾ ಮುಖಂಡರೊಬ್ಬರು ಕಲಾ ದಸರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ಜನಪ್ರತಿನಿಧಿಗಳ ದರ್ಬಾರ್ ?
“ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೈಸೂರು ಮಾದರಿಯಲ್ಲಿ ದಸರಾ ಆಚರಣೆಗೆ ಸರ್ಕಾರ ವಿಶೇಷ ಅನುದಾನ ಒದಗಿಸಿದರೆ, ಆ ಅನುದಾನದಲ್ಲಿ ಆದ್ಯತೆಗೆ ಅನುಗುಣವಾಗಿ, ಉತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಆಚರಿಸಿದರೆ ಅಭ್ಯಂತರವೇನಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳು ಹಾಗೂ ನಾನಾ ಇಲಾಖೆಗಳಿಗೆ ಹೊರೆಹಾಕಿ, ಇನ್ನಿಲ್ಲದ ಒತ್ತಡ ಹೇರಿ ಅನುದಾನ ದುರ್ಬಳಕೆ ಮಾಡಿಕೊಂಡು ಉತ್ಸವ ಆಚರಿಸಿದರೆ ಅಭಿವೃದ್ಧಿ ಕೆಲಸಗಳ ಗತಿಯೇನು ? ಇದು ಒಂದು ತರದಲ್ಲಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಖಾಸಗಿ ದರ್ಬಾರ್ ನಡೆಸಿದಂತಾಗುವುದಿಲ್ಲವೇ. ಮೂರು ಪಕ್ಷಗಳು ಒಂದಾಗಿವೆ ಎನ್ನುವ ಕಾರಣಕ್ಕೆ ಅಧಿಕಾರಿಗಳು, ಪ್ರಭಾವಕ್ಕೆ ಮಣಿದು ಸೈ ಎಂದಿರುವುದು ಏನರ್ಥ” ಎಂದು ಕಾರ್ಮಿಕ ಮುಖಂಡರೊಬ್ಬರು ಪ್ರಶ್ನಿಸುತ್ತಾರೆ.
“ಕೆಲ ಉಸ್ತುವಾರಿಗಳ ರೀಲ್ಸ್ ಪ್ರಚಾರ ನೋಡಿ ಕಣ್ತುಂಬಿಕೊಂಡಿದ್ದೇವೆ”
“ಕೆಲವರು ಉತ್ಸವದ ಹೆಸರಿನಲ್ಲಿ ತರಹೇವಾರಿ ರೀಲ್ಸ್‌ ಗಳನ್ನು ಜಾಲತಾಣದಲ್ಲಿ ಬುಳು.. ಬುಳು.. ಹರಿಬಿಡುತ್ತಿದ್ದನ್ನು ನೋಡಿ ಕಣ್ತುಂಬಿಕೊಂಡಿದ್ದೇವೆ. ಈ ರೀಲ್ಸ್ ಪ್ರಚಾರಕ್ಕೆ ಮರುಳಾಗದವರುಂಟೇ ? ಉತ್ಸವದ ಹೆಸರು, ಪ್ರಚಾರ ಜೋರು !! ಈ ರೀತಿಯ ಪ್ರಚಾರ ವೈಖರಿ ಎಲ್ಲರಿಗೂ ಸೋಷಿಯಲ್ ಮೀಡಿಯಾದಲ್ಲಿ ಹಬ್ಬದೂಟವನ್ನೇ ಉಣಬಡಿಸದೆ. ಇನ್ನೂ ಜನಪ್ರತಿನಿಧಿಗಳಿಗಿಂತ ಕೆಲ ‘ಉಸ್ತುವಾರಿಗಳು’ ಹಾದಿ ಬೀದಿಯಲ್ಲಿ, ವೇದಿಕೆಯಲ್ಲಿ ಥಕ ಥೈ ಎಂದು ಕುಣಿದು, ಕುಪ್ಪಳಿಸಿ ಡ್ರೋನ್, ರೀಲ್ಸ್‌ ನಲ್ಲಿ ಮಿಂಚಿದ್ದು ನೋಡಿದರೆ, ಇದು ಉತ್ಸವವೋ ಸ್ಯಾಂಡಲ್‌ವುಡ್ ಸಿನಿಮಾವೋ ಎಂದು ಅಚ್ಚರಿಪಟ್ಟದ್ದುಂಟು” ಎಂದು ಯುವಕರೊಬ್ಬರು ವ್ಯಂಗ್ಯವಾಗಿ ವಿಮರ್ಶಿಸಿದ್ದಾರೆ.
ಸ್ಯಾಂಡಲ್‌ವುಡ್ ಕಲಾವಿದರಿಗೆ ಭರಪೂರ ಭಕ್ಷೀಸು ? ಸ್ಥಳೀಯ ಕಲಾವಿದರ ನಿರ್ಲಕ್ಷ್ಯ ?
“ಕನ್ನಡ ಸಿನಿ ಪ್ರಮುಖ ಕಲಾವಿದರನ್ನು ಕರೆಸಿ ಅವರಿಗೆ ಭರಪೂರ ಭಕ್ಷೀಸು ನೀಡಲಾಗಿದೆ. ಆದರೆ, ಸ್ಥಳೀಯ ಕಲಾವಿದರನ್ನು ನಿರ್ಲಕ್ಷಿಸಲಾಗಿದೆ. ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗಿಂತ ಹೊರಗಿನ ಕಲಾವಿದರೆ ತುಂಬಿ ತುಳುಕಿದರು.ನಮ್ಮನ್ನು ಬೆರಳೆಣಿಕೆಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡದ್ದು ಹೊರತುಪಡಿಸಿ, ಉಳಿದವುಗಳನ್ನು ನಾವು ಮೂಕ ಪ್ರೇಕ್ಷರಾಗಿ ನೋಡುವಂತಾಯಿತು” ಎಂದು ಸ್ಥಳೀಯ ಕಲಾವಿದರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರದಿಂದ ಬಂದ ಅನುದಾನವೆಷ್ಟು ? ಖರ್ಚಾದದ್ದೆಷ್ಟು ?
“ಉತ್ಸವಕ್ಕೆ ಸರ್ಕಾರದಿಂದ ಬಂದ ಅನುದಾನವೆಷ್ಟು, ಖರ್ಚಾದದ್ದೆಷ್ಟು ? ಇಲಾಖೆಗಳಿಗೆ ನೀಡಿದ ಹೊಣೆಗಾರಿಕೆಯೇನು ? ಆಯಾ ಇಲಾಖೆಗಳಿಂದ ಉತ್ಸವಕ್ಕೆ ಏನಾದರೂ ಹಣಕಾಸಿನ ನೆರವು ಪಡೆಯಲಾಗಿದೆಯೇ ? ಮೂರು ಪಕ್ಷಗಳು ಉತ್ಸವಕ್ಕೆ ಎಷ್ಟು ಹಣ ಖರ್ಚು ಮಾಡಿದ್ದಾರೆ ? ಮತ್ತು ಆಯಾ ಪಕ್ಷಗಳಿಗೆ ಯಾವ್ಯಾವ ಜವಾಬ್ದಾರಿ ವಹಿಸಿಕೊಡಲಾಗಿತ್ತು ? ಸಾರ್ವಜನಿಕರಿಂದ ಏನಾದರೂ ದೇಣಿಗೆ ಪಡೆಯಲಾಗಿದೆಯೇ ? ಎಂಬುದನ್ನು ಮೂರು ಪಕ್ಷಗಳಿಂದ ಕೂಡಿದ್ದ ಉತ್ಸವ ಸಮಿತಿಯು ಸಾರ್ವಜನಿಕರ ಮುಂದೆ ಬಹಿರಂಗಪಡಿಸುವ ಮೂಲಕ ಪಾರದರ್ಶಕತೆಯನ್ನು ಕಾಪಾಡಬೇಕು. ಆ ಮೂಲಕ ತಾಲೂಕಿನ ನಾಗರಿಕರ ನಂಬುಗೆಗೆ ಪಾತ್ರರಾಗಬೇಕೆಂದು” ಕೆಲ ಸಾರ್ವಜನಿಕರು ಉತ್ಸವ ಸಮಿತಿಗೆ ಮನವಿ ಮಾಡಿದ್ದಾರೆ.
‘ಅಭಿವೃದ್ಧಿಗಾಗಿ ಮೂರು ಪಕ್ಷಗಳು ಒಂದುಗೂಡಲಿ’
“ಈ ಬಾರಿ ದಸರಾ ಉತ್ಸವ ಸಮಿತಿ ವಿಶೇಷವಾಗಿತ್ತು. ಉತ್ಸವಕ್ಕಾಗಿ ಮೂರು ಪಕ್ಷಗಳು ಪಕ್ಷಭೇದ ಮರೆತು ಒಗ್ಗೂಡಿದ್ದು, ಉತ್ತಮ ಸಂದೇಶವಾಗಿದೆ. ಇದೇ ರೀತಿ ಅಭಿವೃದ್ಧಿ ಕೆಲಸಗಳಿಗೆ ಮೂರು ಪಕ್ಷಗಳು ಒಂದುಗೂಡಲಿ. ಕ್ಷೇತ್ರದಲ್ಲಿ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಇನ್ನಿತರೆ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪರಸ್ಪರ ಕೈಜೋಡಿಸಬೇಕಿದೆ. ಕಲಾ ದಸರಾ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಕಲಾವಿದರು ಪ್ರದರ್ಶಿಸಿದ ನೃತ್ಯ ಮನಮೋಹಕವಾಗಿತ್ತು. ಅಲ್ಲದೇ ‘ಲುಂಗಿ ಡ್ಯಾನ್ಸ್’ ಕೂಡ ಬಹಳಷ್ಟು ಚೆನ್ನಾಗಿತ್ತು” ಎಂದು ಯುವಕರೊಬ್ಬರು ಹೇಳುತ್ತಾರೆ.

Namma Sindhanuru Click For Breaking & Local News

ಸಮಸ್ಯೆಗಳು ಸಾಲು ಸಾಲು, ಕೇಳೋರಿಲ್ಲ ಅಹವಾಲು, ಸಾರ್ವಜನಿಕರ ಪ್ರಶ್ನೆ
ಕುಡಿಯುವ ನೀರಿನ ಕೆರೆ ದುರಸ್ತಿಗೆ ಇನ್ನೂ ಕಾಲ ಏಕೆ ಕೂಡಿ ಬಂದಿಲ್ಲ ?, ಸಿಂಧನೂರಿನ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸಂಬAಧಿಸಿ, ತುರ್ವಿಹಾಳನ ಹೊರವಲಯದಲ್ಲಿರುವ ಜಮೀನಿನಲ್ಲಿ 2ನೇ ಹಂತದಲ್ಲಿ 149 ಎಕರೆಯ ಕೆರೆ ಕಾಮಗಾರಿ ಆರಂಭವಾಗುವುದು ಯಾವಾಗ ?, ಸಿಂಧನೂರಿನ 31 ವಾರ್ಡ್‌ಗಳಲ್ಲಿ ಹಲವು ವಾರ್ಡ್ಗಳ ರಸ್ತೆ ಅಧ್ವಾನ ಸ್ಥಿತಿಗೆ ತಲುಪಿದ್ದು, ದುರಸ್ತಿ ಎಂದು ?, ಬಿಸಿಎಂ ಹಾಸ್ಟೆಲ್‌ಗಳ ಕೊರತೆಯಿಂದ ವಿದ್ಯಾರ್ಥಿಗಳ ಪರದಾಟ ನಡೆಸಿದರೂ, ಕ್ಯಾರೆ ಅನ್ನೋರಿಲ್ಲ ಯಾಕೆ ?, ಡ್ಯಾಂ ತುಂಬಿ ತುಳುಕಿದರೂ ವಾರಕ್ಕೊಮ್ಮೆ ನಗರದ ವಾರ್ಡ್ಗಳಿಗೆ ನೀರು ಸರಬರಾಜು ತಪ್ಪಿಲ್ಲ !, ಕಾಗದದಲ್ಲೇ ಉಳಿದ 24×7 ಕುಡಿಯುವ ನೀರಿನ ಯೋಜನೆ, ಜಾರಿಯಾಗುತ್ತಾ ?, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಉದ್ಘಾಟನೆ ಭಾಗ್ಯ ಇನ್ನೂ ದೊರಕಿಲ್ಲ ಏಕೆ ?, ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿ, ವೈದ್ಯರ-ಸಿಬ್ಬಂದಿ ಕೊರತೆಯಿಂದ ಚಿಕಿತ್ಸೆಗಾಗಿ ಸಾರ್ವಜನಿಕರು ಪರದಾಟ ನಡೆಸಿದರೂ ಕನಿಷ್ಠಪಕ್ಷ ಇಲ್ಲಿನ ಸಮಸ್ಯೆ ಕೇಳೋರಿಲ್ಲ ಏನಿದು ?, ಬೋರ್ಡಿಗೆ ಸೀಮಿತವಾದ ಪಿಡಬ್ಲ್ಯುಡಿ ಕ್ಯಾಂಪಿನ ಕೇಂದ್ರೀಯ ವಿದ್ಯಾಲಯ, ಆರಂಭವಾಗೋದು ಎಂದು !, ಬಗೆಹರಿಯದ ಟೇಲ್ಯಾಂಡ್ ಭಾಗದ ರೈತರ ಜಮೀನುಗಳಿಗೆ ನೀರಿನ ಸಮಸ್ಯೆ ಪರಿಹಾರವಾಗುವುದೇ ?, ಹಾಸ್ಟೆಲ್‌ಗಳು ಅವ್ಯವಸ್ಥೆ ತಾಂಡವವಾಡುತ್ತಿದ್ದರೂ, ವಿದ್ಯಾರ್ಥಿಗಳನ್ನು ಮಾತಾಡಿಸೋರಿಲ್ಲ ಯಾಕೆ ?, ಪೂರ್ಣಗೊಳ್ಳದ ತಾ.ಪಂ.ಕಚೇರಿ ಕಟ್ಟಡ ಕಾಮಗಾರಿ !, ಸ್ಥಗಿತಗೊಂಡ ಸರ್ಕಾರಿ ಆರ್.ಒ ಪ್ಲಾಂಟ್‌ಗಳು, ದುರಸ್ತಿ ಮಾಡಿಸೋದು ಎಂದು ?, ವಿವಿಧ ಇಲಾಖೆಗಳ ಬಾಕಿ ಕಾಮಗಾರಿಗಳು ಚುರುಕುಗೊಂಡು ಮುಗಿಯೋದು ಯಾವಾಗ ?, ಬೇಸಿಗೆಯಲ್ಲಿ ಜನರಿಗೆ ಇನ್ನಿಲ್ಲದ ಸಮಸ್ಯೆ ತಂದೊಡ್ಡುವ ಹಲವು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಎಂದು ? ಹೀಗೆ ಸಾರ್ವಜನಿಕರು ಹಲವು ಪ್ರಶ್ನೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *