(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 16
ನಗರದ 31ವಾರ್ಡ್ ಗಳಿಗೆ ಇನ್ಮುಂದೆ 10 ದಿನಕ್ಕೊಮ್ಮೆ ಕುಡಿವ ನೀರು ಪೂರೈಸುವುದಾಗಿ ನಗರಸಭೆ ಆಡಳಿತ ದಿನಾಂಕ: 16-05-2024ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿ ತಿಳಿಸಿದೆ. ಈ ಪ್ರಕಟಣೆಯಲ್ಲಿ ನೀರಿನ ಲಭ್ಯತೆ ಸೇರಿದಂತೆ ಹಲವು ಮಾಹಿತಿಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದು, ವಾರಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿರುವುದನ್ನು ಇನ್ನೆರಡು ದಿನಕ್ಕೆ ವಿಸ್ತರಿಸಿರುವುದರ ಬಗ್ಗೆ ಮುನ್ಸೂಚನೆ ನೀಡಿದೆ.
“ಸಿಂಧನೂರು ನಗರಸಭೆಯು ಮೂರು ಜಲ ಮೂಲಗಳನ್ನು ಹೊಂದಿದ್ದು, ತುಂಗಭದ್ರಾ ಎಡದಂಡೆ ಕಾಲುವೆಯ ಮೇಲೆಯೇ ಅವಲಂಬಿತವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಗರಸಭೆಯು ವಾರಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಸುತ್ತಿದ್ದು, ನೀರಿನ ಲಭ್ಯತೆಯ ಆಧಾರದ ಮೇಲೆ ಮತ್ತೆ ಎರಡು ದಿನಗಳನ್ನು ವಿಸ್ತರಿಸಿದೆ. ಇನ್ನೂ ಮುಂದೆ ನಗರಸಭೆಯು ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸುವವರೆಗೂ 10 ದಿನಗಳಗೊಮ್ಮೆ ನೀರು ಸರಬರಾಜು ಮಾಡಲಾಗುವುದು. ಹಾಗಾಗಿ ಸಿಂಧನೂರು ನಗರದ ಜನತೆಯು ನಗರಸಭೆಯೊಂದಿಗೆ ಸಹಕರಿಸಲು ಕೋರಿದೆ. ಮೂರು ಕೆರೆಗಳಲ್ಲಿ ಒಟ್ಟು ನೀರಿನ ಪ್ರಮಾಣವನ್ನಾಧರಿಸಿ ಈ ತೀರ್ಮಾನಕ್ಕೆ ಬಂದಿದ್ದು ನಗರದ ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಸಲು ಹಾಗೂ ತಮ್ಮ ಎಲ್ಲಾ ನಳ ಸಂಪರ್ಕಗಳಿಗೆ ನೀರು ಪೋಲಾಗದಂತೆ ಜಾಗೃತಿ ವಹಿಸಲು ಸೂಚಿಸಿದೆ” ಪ್ರಕಟಣೆಯಲ್ಲಿ ತಿಳಿಸಿದೆ.