(ಜನದನಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 12
ನಗರದಲ್ಲಿ ಬೇಸಿಗೆಯಲ್ಲಿ ಉಂಟಾಗಿರುವ ಕುಡಿವ ನೀರಿನ ಸಮಸ್ಯೆ, ಸಾರ್ವಜನಿಕರ ಅಹವಾಲು ಕುರಿತಂತೆ ಚರ್ಚಿಸುವ ಹಿನ್ನೆಲೆಯಲ್ಲಿ ನಿಯಮಿತವಾಗಿ ನಗರಸಭೆಯಲ್ಲಿ ಸಮರ್ಪಕವಾಗಿ ಸಭೆಗಳು ನಡೆಯುತ್ತಿಲ್ಲ. ಇದರಿಂದಾಗಿ ನಗರದ 31 ವಾರ್ಡ್‌ಗಳ ವಿವಿಧ ಬಡಾವಣೆಗಳಲ್ಲಿ ಜನರು ನೀರಿನ ಅಭಾವ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ಹಲವು ತಿಂಗಳಿನಿಂದ ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಸ್ತಿತ್ವದಲ್ಲಿಲ್ಲದ ಕಾರಣ, ಆಡಳಿತ ಹಳಿತಪ್ಪಿದ್ದು, ಅಧಿಕಾರಿಗಳ ಬೇಜವಾಬ್ದಾರಿ ಹೆಚ್ಚಿದೆ. ಏನೇ ಸಮಸ್ಯೆ ಹೇಳಿಕೊಂಡು ಹೋದರೂ ಮೊದಲು ಎಲೆಕ್ಷನ್ ಮುಗಿಯಲಿ ಎಂದು ಸಬೂಬು ಹೇಳುತ್ತಿದ್ದರು, ಈಗ ಎಲೆಕ್ಷನ್ ಮುಗಿದಿದ್ದು, ಮೊನ್ನೆ ಎಲೆಕ್ಷನ್ ಮುಗಿದಿದೆ ಸ್ವಲ್ಪ ತಡೀರಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ಸಮಸ್ಯೆಗಳನ್ನು ಯಾರ ಬಳಿ ಹೇಳಬೇಕು ಎಂದು ಅರ್ಥವಾಗುತ್ತಿಲ್ಲ. ನಗರದ ನೀರಿನ ಸಮಸ್ಯೆಯ ಬಗ್ಗೆ ಶಾಸಕರೂ ಸಹ ಗಂಭೀರವಾಗಿ ತೆಗೆದುಕೊಂಡಿಲ್ಲ ಈ ಕುರಿತು ಸಭೆ ಕರೆದು ಅಧಿಕಾರಿಗಳನ್ನು ಎಚ್ಚರಿಸಿಲ್ಲ ಎಂದು ನಗರದ ವಾರ್ಡ್ವೊಂದರ ನಾಗರಿಕರೊಬ್ಬರು ದೂರುತ್ತಾರೆ.
ಕಂದು ಬಣ್ಣಕ್ಕೆ ತಿರುಗಿದ ನೀರು
ನಗರಸಭೆಯಿಂದ ವಾರ್ಡ್ಗಳಿಗೆ ಎಂಟು ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದ್ದು, ಈ ನೀರು ಸಹ ಕಂದು ಬಣ್ಣಕ್ಕೆ ತಿರುಗಿದೆ. ಕುಷ್ಟಗಿ ಮಾರ್ಗದಲ್ಲಿರುವ ಕುಡಿವ ನೀರಿನ ಕೆರೆ ಮತ್ತು ತುರ್ವಿಹಾಳ ಕೆರೆಯಿಂದ ನಗರಕ್ಕೆ ಪೂರೈಕೆಯಾಗುತ್ತಿರುವ ನೀರನ್ನು ಸಮರ್ಪಕವಾಗಿ ಶುದ್ಧೀಕರಣ ಮಾಡದೇ ಹಾಗೆಯೇ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಬೇಸಿಗೆಯಲ್ಲಿ ಅನಾರೋಗ್ಯ ಸಮಸ್ಯೆ ಕಾಡುವ ಭೀತಿ ಇದೆ. ನಗರದ ಜನಸಂಖ್ಯೆಗೆ ತಕ್ಕಂತೆ ಕುಡಿವ ಮತ್ತು ಬಳಕೆ ನೀರು ಪೂರೈಕೆ ನಿಟ್ಟಿನಲ್ಲಿ ನಗರಸಭೆ ವಿಫಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸರ್ಕಾರಿ ನೀರಿನ ಘಟಕ ಅರೆಬರೆ ಕಾರ್ಯನಿರ್ವಹಣೆ, ಖಾಸಗಿ ಪ್ಲಾಂಟ್ ಫುಲ್ ರಶ್
ನಗರದ ವಿವಿಧ ವಾರ್ಡ್ಗಳಲ್ಲಿ ಅಳವಡಿಸಿರುವ ಸರ್ಕಾರಿ ಶುದ್ಧ ನೀರಿನ ಘಟಕಗಳು ಹಲವೆಡೆ ಕಾರ್ಯಸ್ಥಗಿತಗೊಳಿಸಿದ್ದರೆ, ಇನ್ನೂ ಕೆಲವೆಡೆ ಅರೆ-ಬರೆಯಾಗಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ವಾಟರ್ ಪ್ಲಾಂಟ್‌ಗಳ ದುಃಸ್ಥಿತಿಯಿಂದಾಗಿ, ಜನರು ಖಾಸಗಿ ನೀರಿನ ಘಟಕಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ನಗರದ ವಾರ್ಡ್ವೊಂದರ ನಿವಾಸಿಯೊಬ್ಬರು ಹೇಳುತ್ತಾರೆ.