ಸಿಂಧನೂರಿನ ಕುಡಿವ ನೀರಿನ ಕೆರೆ ಖಾಲಿ !

Spread the love

ನಮ್ಮ ಸಿಂಧನೂರು, ಫೆಬ್ರವರಿ 19
ಫೆಬ್ರವರಿ ಕೊನೆ ವಾರದಲ್ಲೇ ಸಿಂಧನೂರು ನಗರದ ಕುಡಿವ ನೀರಿನ ಕೆರೆ ಸಂಪೂರ್ಣ ಖಾಲಿಯಾಗಿದ್ದು, ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ಬಾರಿ ತುಂಗಭದ್ರಾ ನಾಲೆಯಲ್ಲಿ ನೀರಿನ ಹರಿವಿದ್ದ ಕಾರಣ ಸಮಸ್ಯೆಯಾಗಿರಲಿಲ್ಲ, ಈ ಬಾರಿ ಬರಗಾಲ ಆವರಿಸಿದ್ದು, ಡಿಸೆಂಬರ್‌ನಲ್ಲೇ ವಿತರಣಾ ನಾಲೆಗಳಿಗೆ ನೀರಿನ ಹರಿವು ಸ್ಥಗಿತಗೊಂಡಿದ್ದರಿಂದ ಗ್ರಾಮೀಣ ಪ್ರದೇಶ ಸೇರಿದಂತೆ ನಗರದ ಕುಡಿವ ನೀರಿನ ಕೆರೆಗಳು ಖಾಲಿಯಾಗಿವೆ.

Namma Sindhanuru Click For Breaking & Local News

ನಗರದ 31 ವಾರ್ಡ್‌ಗಳು ಕುಡಿಯುವ ನೀರಿನ ಕೆರೆಯನ್ನೇ ಅವಲಂಬಿಸಿದ್ದು, ಈ ಬಾರಿ ಬೇಗನೇ ಕೆರೆ ಖಾಲಿಯಾಗಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ಬಳಕೆ ನೀರಿಗೆ ಅಲ್ಪಸ್ವಲ್ಪ ಆಸರೆಯಾಗಿದ್ದ ಹಳ್ಳ ಬತ್ತಿ ಬಣಗುಟ್ಟುತ್ತಿದೆ. ಈ ನಡುವೆ ತಾಲೂಕಿನ ಗಡಿಭಾಗದ ತುಂಗಭದ್ರಾ ನದಿಯೂ ನೀರಿಲ್ಲದೇ ಖಾಲಿಯಾಗಿದೆ. ನಗರ ಸೇರಿ ನಗರ ವ್ಯಾಪ್ತಿಯಲ್ಲಿರುವ ನೀರಿನ ಮೂಲಗಳು ಅಂತರ್ಜಲ ಕುಸಿತದಿಂದಾಗಿ ದುಃಸ್ಥಿತಿಯಲ್ಲಿದ್ದು, ನಾಲೆಗಳಿಗೆ ನೀರು ಬರುವವರೆಗೂ ನೀರಿನ ಸಮಸ್ಯೆ ನಿಭಾಯಿಸುವುದು ಹೇಗೆ ಎನ್ನುವುದು ಸವಾಲಾಗಿ ಪರಿಣಮಿಸಿದೆ.

Namma Sindhanuru Click For Breaking & Local News

ಮೂರ‍್ನಾಲ್ಕು ದಿನಕ್ಕೊಮ್ಮೆ ನೀರು: ನೀರಿನ ಕೊರತೆಯಿಂದಾಗಿ ಈಗಾಗಲೇ ಮರ‍್ನಾಲ್ಕು ದಿನಗಳಿಗೊಮ್ಮೆ ನಗರದ ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತಿದ್ದು, ಕೆರೆ ಖಾಲಿಯಾಗಿರುವುದರಿಂದ ನೀರಿನ ವಾರಾಬಂಧಿ ಇನ್ನಷ್ಟು ಹೆಚ್ಚಿಲಿದೆಯೇ ಎನ್ನುವ ಅನುಮಾನ ಜನರಲ್ಲಿ ಶುರುವಾಗಿದೆ. 2011ರ ಜನಗಣತಿ ಪ್ರಕಾರವೇ ನಗರದಲ್ಲಿ 70ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಈಗ ಅಂದಾಜು 1 ಲಕ್ಷಕ್ಕೂ ಹೆಚ್ಚಿದೆ. ಅಷ್ಟು ಜನಸಂಖ್ಯೆಗೆ ತಕ್ಕಂತೆ ನೀರು ಪೂರೈಕೆ ಮಾಡಬೇಕಾದ ನಗರಸಭೆ ನಿರ್ಲಕ್ಷ್ಯವಹಿಸಿದ್ದು, ಮುಂದಾಲೋಚನೆ ಇಲ್ಲದೇ ವರ್ತಿಸುತ್ತಿದೆ ಎನ್ನುವ ಆರೋಪ ಸಾರ್ವಜನಿಕರದ್ದಾಗಿದೆ.

Namma Sindhanuru Click For Breaking & Local News

ಅಧ್ಯಕ್ಷ, ಉಪಾಧ್ಯಕ್ಷರಿಲ್ಲದ ನಗರಸಭೆ: ದಿನದಿಂದ ದಿನಕ್ಕೆ ಬೇಸಿಗೆಯ ಧಗೆ ಹೆಚ್ಚುತ್ತಿದೆ. ಆದರೆ ನಗರ ವಾಸಿಗಳ ಕುಡಿವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಸಭೆಗಳಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರಿಲ್ಲದ ಕಾರಣ ಆಡಳಿತ ಹಳಿ ತಪ್ಪಿದ್ದು, ಕುಡಿವ ನೀರಿನ ಸಭೆ ಸೇರಿದಂತೆ ಸಾಮಾನ್ಯ ಸಭೆಗಳು ನಡೆಯುವುದೇ ಅಪರೂಪವಾಗಿದೆ. ಹೀಗಾಗಿ ಸ್ಥಳೀಯ ನಗರಸಭೆಯ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಸಾರ್ವಜನಿಕರು ದೂರುತ್ತಾರೆ.

Namma Sindhanuru Click For Breaking & Local News

ತುಂಗಭದ್ರಾ ಡ್ಯಾಂನಲ್ಲಿ 9.27 ಟಿಎಂಸಿ ನೀರು : ತುಂಗಭದ್ರಾ ಅಣೆಕಟ್ಟೆಯಲ್ಲಿ ಕಳೆದ ಬಾರಿ ಇದೇ ಹೊತ್ತಿನಲ್ಲಿ 36.93 ಟಿಎಂಸಿ ನೀರಿತ್ತು, ಈ ಬಾರಿ 9.27 ಟಿಎಂಸಿ ನೀರಿದ್ದು, ಬರಗಾಲದ ತೀವ್ರತೆ ದಿನವೂ ಜನರನ್ನು ಬಾಧಿಸುತ್ತಿರುವ ಸಂದರ್ಭದಲ್ಲಿ ಕೆರೆ ಸಂಪೂರ್ಣ ಖಾಲಿಯಾಗಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಒಳ ಹರಿವು 0 ಇದ್ದು, ದಿನಾಂಕ: 19-02-2024 ರಂದು ಕೇವಲ 165 ಕ್ಯೂಸೆಕ್ ನೀರನ್ನಷ್ಟೇ ಡ್ಯಾಂನಿಂದ ಹರಿಸಲಾಗಿದೆ. ಹೀಗಾಗಿ ಮುಂಬರುವ ಮಳೆಗಾಳದವರೆಗೂ ನೀರಿನ ಸಮಸ್ಯೆಯನ್ನು ಪರಿಹರಿಸುವುದು ಹೇಗೆನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಜಿಲ್ಲಾ, ತಾಲೂಕು ಆಡಳಿತ ಹಾಗೂ ಶಾಸಕರ ನಿರ್ಲಕ್ಷö್ಯ ಆರೋಪ: ಕುಡಿವ ನೀರಿನ ಕೆರೆ ಖಾಲಿಯಾಗಿ ಜನರು ಮುಂದೇಗೆ ಎಂದು ಆತಂಕ ಎದುರಿಸುತ್ತಿದ್ದರೆ, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕರು ನಿರ್ಲಕ್ಷ್ಯವಹಿಸಿದ್ದಾರೆ. ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಬೇಜವಾಬ್ದಾರಿ ವಹಿಸಿದ್ದಾರೆ. ಹೀಗೆ ಮುಂದುವರಿದರೆ ಜನರು ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಪ್ರಗತಿಪರ ಸಂಘಟನೆಗಳ ಮುಖಂಡರ ಅಭಿಪ್ರಾಯವಾಗಿದೆ.

Namma Sindhanuru Click For Breaking & Local News

ಕಾಲುವೆಗೆ ನೀರು ಹರಿಸಿ, ಕೆರೆಗೆ ನೀರು ತುಂಬಿಸಿ : ಕೂಡಲೇ ಶಾಸಕರು ಕುಡಿವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಾಲೂಕಾಡಳಿತದ ಸಭೆ ಕರೆದು, ನಾಲೆಗೆ ನೀರು ಹರಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು, ಹದಿನೈದು ದಿನದೊಳಗೆ ನೀರು ತುಂಬಿಸದೇ ಹೋದರೆ ಕುಡಿವ ನೀರಿನ ಸಮಸ್ಯೆಯಿಂದ ಜನರು ಹಾಗೂ ಜಾನುವಾರುಗಳು ಪರಿತಪಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.


Spread the love

Leave a Reply

Your email address will not be published. Required fields are marked *