ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಆಗಸ್ಟ್ 31
ವರ್ಷಾನುಗಟ್ಟಲೆಯಿಂದ ತೆರಿಗೆ ಬಾಕಿ ಪಾವತಿಸದಿರುವ ಅಂಗಡಿಗಳಿಗೆ ಮೇಲೆ ದಾಳಿ ನಡೆಸಿದ, ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ತಂಡ, ತೆರಿಗೆ ಪಾವತಿಸಲು ಸಬೂಬು ಹೇಳಿದ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ, ಅಂಗಡಿ ಡೋರ್ ಕ್ಲೋಸ್ ಮಾಡಿದ ಘಟನೆ ಶನಿವಾರ ಬೆಳಿಗ್ಗೆ ನಡೆಯಿತು.
ನಗರದ ಗಾಂಧಿ ಸರ್ಕಲ್‌ನಲ್ಲಿರುವ ತಾಲೂಕು ಪಂಚಾಯಿತಿಯ ವಾಣಿಜ್ಯ ಕಾಂಪ್ಲೆಕ್ಸ್‌ನಲ್ಲಿ ಫ್ಯಾನ್ಸಿಸ್ಟೋರ್ ಇಟ್ಟುಕೊಂಡಿರುವ ಅಂಗಡಿ ಮಾಲೀಕರು ಹಲವು ವರ್ಷಗಳಿಂದ ತೆರಿಗೆ ಪಾವತಿಸದೇ ಇರುವುದರಿಂದ ಕೂಡಲೇ ತೆರಿಗೆ ಪಾವತಿಸುವಂತೆ ನಗರಸಭೆ ಪೌರಾಯುಕ್ತರು ಸೂಚಿಸಿದರು. ಇದಕ್ಕೆ ಅಂಗಡಿ ಮಾಲೀಕರು ಸಬೂಬು ಹೇಳಲು ಮುಂದಾಗುತ್ತಿದ್ದಂತೆ, ಮಾಲೀಕರನ್ನು ಅಂಗಡಿಯಿಂದ ಹೊರಗೆ ಕರೆದ ನಗರಸಭೆ ಸಿಬ್ಬಂದಿಯವರು, ಡೋರ್ ಕ್ಲೋಸ್ ಮಾಡಿದರು. ತೆರಿಗೆ ಪಾವತಿಸಿದ ನಂತರ ಅಂಗಡಿಯ ಕೀ ಕೊಡುವುದಾಗಿ ಮಾಲೀಕರಿಗೆ ಹೇಳಿದರು. ನಗರಸಭೆ ಪೌರಾಯುಕ್ತರು ಹಾಗೂ ಸಿಬ್ಬಂದಿ ತಂಡ, ಔಷಧಿ ಅಂಗಡಿ, ಕಿರಾಣಿ ಅಂಗಡಿ ಸೇರಿದಂತೆ ವಿವಿಧ ವಾಣಿಜ್ಯ ಅಂಗಡಿಗಳಿಗೆ ಭೇಟಿ ನೀಡಿ ತೆರಿಗೆ ಪಾವತಿಸದಿರುವ ಅಂಗಡಿ ಮಾಲೀಕರಿಂದ ತೆರಿಗೆ ಪಾವತಿಸಿಕೊಳ್ಳಲಾಯಿತು.
ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡವರಿಗೆ ನಡುಕ
ಅಂಗಡಿ ಮುಂಗಟ್ಟುಗಳು, ವಿವಿಧ ವಾಣಿಜ್ಯ ಕಾಂಪ್ಲೆಕ್ಸ್‌ನಲ್ಲಿ ಅಂಗಡಿಗಳನ್ನು ಹೊಂದಿರುವ ಮಾಲೀಕರು ಸೇರಿದಂತೆ ಇನ್ನಿತರರು ಹಲವು ವರ್ಷಗಳಿಂದ ಸಮರ್ಪಕವಾಗಿ ತೆರಿಗೆ ಪಾವತಿಸದಿರುವುದರಿಂದ ನಗರಸಭೆಯ ಆದಾಯದ ಮೂಲದ ಮೇಲೆ ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ. ತೆರಿಗೆ ಪಾವತಿಸುವಂತೆ ಈಗಾಗಲೇ ಹಲವು ಬಾರಿ ಸೂಚನೆ ನೀಡಿ, ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡು ಮೇಲಿಂದ ಮೇಲೆ ಗಮನಕ್ಕೆ ತಂದಾಗ್ಯೂ ಹಲವರು ನಗರಸಭೆಗೆ ತೆರಿಗೆ ಪಾವತಿಸದೇ ಇರುವುದರಿಂದ ಪೌರಾಯುಕ್ತರೇ ನೇರವಾಗಿ ಸಿಬ್ಬಂದಿಯೊಂದಿಗೆ ಫೀಲ್ಡಿಗಿಳಿದಿದ್ದಾರೆ ಎಂದು ತಿಳಿದುಬಂದಿದೆ.