ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 03
ಕರ್ತವ್ಯ ವೇಳೆಗೆ ಕೆಲಸಕ್ಕೆ ಹಾಜರಾಗದ ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿಯನ್ನು ಖಂಡಿಸಿ, ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಮಂಗಳವಾರ ಬೆಳೀಗ್ಗೆ 11 ಗಂಟೆ ಸುಮಾರು ದಿಢೀರ್ ಪ್ರತಿಭಟನೆ ನಡೆಸಿ, ವೈದ್ಯರ ವಿರುದ್ಧ ಘೋಷಣೆಗಳನ್ನು ಕೂಗಿದರು.
“ತಾಲೂಕಿನ ಸಿಂಗಾಪುರ ಗ್ರಾಮದ ಬಾಲಕನೋರ್ವನನ್ನು ಪೋಷಕರು ಚಿಕಿತ್ಸೆಗಾಗಿ ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಬೆಳಿಗ್ಗೆ 10 ಗಂಟೆಯಾದರೂ ಡ್ಯೂಟಿ ವೈದ್ಯರು ಬಾರದೇ ಇರುವುದರಿಂದ ಬಾಲಕನಿಗೆ ಚಿಕಿತ್ಸೆ ದೊರೆಯದ ಕಾರಣ, ನೋವು ತಾಳದೇ ಕಣ್ಣೀರಾಕುತ್ತಿರುವ ಬಗ್ಗೆ ಪೋಷಕರು ನಮ್ಮ ಸಂಘಟನೆಯವರ ಗಮನಕ್ಕೆ ತಂದರು. ಆ ಕೂಡಲೇ ಆಸ್ಪತ್ರೆಯ ವೈದ್ಯರಿಗೆ ನಾಲ್ಕಾರು ಬಾರಿ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ತತ್‌ಕ್ಷಣ ಆಸ್ಪತ್ರೆಗೆ ಬಂದು ನೋಡಿದಾಗ ಯಾವೊಬ್ಬ ವೈದ್ಯರೂ ಇಲ್ಲದಿರುವುದು ಕಂಡುಬಂತು. ಬಾಲಕ ನೋವಿನಿಂದ ನರಳುತ್ತಿದ್ದರೂ ಕನಿಷ್ಠ ಚಿಕಿತ್ಸೆ ಕೊಡಲು ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಏನಾದರೂ ಅನಾಹುತವಾದರೆ ಯಾರು ಹೊಣೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಮಂಜುನಾಥ ಹಾಗೂ ಡಾ.ಹನುಮಂತರೆಡ್ಡಿ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.
ದುರ್ನಡತೆ ಸರಿಪಡಿಸದಿದ್ದರ ಹೋರಾಟ : ಮಂಜುನಾಥ ಗಾಣಗೇರ ಎಚ್ಚರಿಕೆ
ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ, ವೈದ್ಯರ ಬೇಜವಾಬ್ದಾರಿ ಮತ್ತು ದುರ್ನಡತೆ ಮಿತಿ ಮೀರಿದೆ. ಕರ್ತವ್ಯದ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಇರಬೇಕಾದ ವೈದ್ಯರು ಬೇರೆ ಬೇರೆ ಕಡೆ ಹೋಗುತ್ತಿರುವುದು ಏಕೆ ? ಇದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಬಡವರು, ದುಡಿಯುವ ಜನರು ಚಿಕಿತ್ಸೆ ದೊರೆಯದೇ ಅಲೆದಾಡುವಂತಾಗಿದೆ. ಇನ್ನು ಹೆರಿಗೆಗಾಗಿ ರಾತ್ರಿ ವೇಳೆ ಆಸ್ಪತ್ರೆಗೆ ಗರ್ಭಿಣಿಯರನ್ನು ಕರೆದುಕೊಂಡು ಬಂದರೆ ಆಸ್ಪತ್ರೆಯಲ್ಲಿ ವೈದ್ಯರೇ ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಬಂದು ವಾಪಸ್ ಹೋಗಬೇಕಾದ ಪರಿಸ್ಥಿತಿ ಇದೆ. ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡು ಬೇರೆ ದಾರಿಯಿಲ್ಲದೇ ಖಾಸಗಿ ಆಸ್ಪತ್ರೆಗೆ ಹೋಗುವಂತಾಗಿದೆ. ಕೆಲ ವೈದ್ಯರು ಕರ್ತವ್ಯದ ವೇಳೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದೇ ರೀತಿ ಮುಂದುವರಿದರೆ ನಮ್ಮ ಸಂಘಟನೆಯಿಂದ ಅನಿರ್ದಿಷ್ಟ ಹೋರಾಡ ನಡೆಸಲಾಗುವುದು ಎಂದು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಎಚ್ಚರಿಸಿದರು.
ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದವರ ಮೇಲೆ ಕ್ರಮ ಜರುಗಿಸಿ: ಉಮೇಶಗೌಡ ಗುಂಜಳ್ಳಿ ಆಗ್ರಹ
ಸರ್ಕಾರಿ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ವೈದ್ಯರು, ಸಿಬ್ಬಂದಿಯ ಮೇಲೆ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಬೇಕು. ಚಿಕಿತ್ಸೆಗಾಗಿ ಬರುವ ಎಲ್ಲ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಉಮೇಶಗೌಡ ಗುಂಜಳ್ಳಿ ವೈದ್ಯಾಧಿಕಾರಿ ಡಾ. ಹನುಮಂತರೆಡ್ಡಿ ಅವರನ್ನು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬೂದೇಶ ಮರಾಠ, ಹುಸೇನ್‌ಬಾಷಾ ಇಂದಿರಾನಗರ, ರಾಘವೇಂದ್ರ ಹಾಗೂ ಸಂಘಟನೆಯ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇನ್ನಿತರರು ಇದ್ದರು.