ಸಿಂಧನೂರು: ನರ ಹುಡುಕಲು ಮಗುವಿನ ಕೈಗೆ ವೈಯರ್ ಕಟ್ಟಿದ ಶೂಶ್ರೂಷಕರು !? ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ, ಪಾಲಕರ ಆರೋಪ

Spread the love

ಸ್ಪೆಷಲ್‌ ನ್ಯೂಸ್: ಬಸವರಾಜ
ನಮ್ಮ ಸಿಂಧನೂರು, ಜನವರಿ 10

ಮಗುವಿಗೆ ಔಷಧಿ ನೀಡಲು ಕೈಯಲ್ಲಿ ನರ ಸಿಗುತ್ತಿಲ್ಲ ಎಂದು, ನಗರದ ಸುಕಾಲಪೇಟೆಯ ಮಾರ್ಗದಲ್ಲಿ ಬರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಲ್ಲಿನ ಸಿಬ್ಬಂದಿ ಎರಡ್ಮೂರು ಬಾರಿ ಪ್ರಯತ್ನಿಸಿ ಕೊನೆಗೆ ವೈಯರ್ ಕಟ್ಟಿ ಕ್ಯಾನಲ್ (cannula) ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದರಿಂದ ಮಗುವಿನ ಕೈಗೆ ಬಾರು ಬಿದ್ದಿವೆ ಎಂದು ಪಾಲಕರೊಬ್ಬರು ಮಾಹಿತಿ ನೀಡಿದ್ದಾರೆ.
“ಇತ್ತೀಚಿಗೆ 1 ವರ್ಷ 10 ತಿಂಗಳ ನಮ್ಮ ಮಗುವನ್ನು ತೋರಿಸಿಕೊಂಡು ಬರಲು ಖಾಸಗಿ ಮಕ್ಕಳ ಆಸ್ಪತ್ರೆಗೆ ಹೋಗಿದ್ದೆವು. ವೈದ್ಯರ ಬಳಿ ತೋರಿಸಿದ ನಂತರ ಅವರು ಮಗುವಿಗೆ ಬಾಟಲ್ ಹಚ್ಚಲು ಅಲ್ಲಿನ ಸಿಬ್ಬಂದಿಗೆ ತಿಳಿಸಿದರು. ಸಿಬ್ಬಂದಿ ಮಗುವಿನ ಕೈಯಲ್ಲಿನ ನರಕ್ಕೆ ಚಾನಲ್ ಹಾಕಲು ಮೊದಲು ಇಬ್ಬರು ಪ್ರಯತ್ನಿಸಿದರು, ನರ ಸಿಗಲಿಲ್ಲ, ತದನಂತರ ಮೂರನೇ ಸಿಬ್ಬಂದಿ ಪ್ರಯತ್ನಿಸಿ ಕ್ಯಾನಲ್ ಹಾಕಿದರು. ನರಕ್ಕೆ ಚಾನಲ್ ಹಾಕುವ ವೇಳೆ ಸರಿಯಾದ ಸಾಧನ ಇಲ್ಲದ ಕಾರಣಕ್ಕೆ ಸಿಬ್ಬಂದಿಯೊಬ್ಬರು ನಮ್ಮ ಮಗುವಿನ ಕೈಗೆ ವೈಯರ್‌ನ್ನು ಬಿಗುವಾಗಿ ಕಟ್ಟಿದ್ದರು. ಇದರಿಂದ ನಮ್ಮ ಮಗು ಕೆಲವೊತ್ತು ವಿಪರೀತ ಅತ್ತಿತು. ಅದನ್ನು ನೋಡಿ ಸಹಿಸಲಾಗಲಿಲ್ಲ, ಈ ಬಗ್ಗೆ ಸಿಬ್ಬಂದಿಗೆ ಆಕ್ಷೇಪ ವ್ಯಕ್ತಪಡಿಸಿದರೆ, ನಾವೇನು ಮಾಡಮ್ರಿ ನರ ಸಿಗ್ತಾಯಿಲ್ಲ ಎಂದು ನಮ್ಮನ್ನೇ ದಬಾಯಿಸಿದರು’ ಎಂದು ಪಾಲಕರು ನೊಂದು ತಿಳಿಸಿದ್ದಾರೆ.
“ಬಾಯಲ್ಲಿ ಗುಟ್ಕಾ, ಕೈಯಲ್ಲಿ ಮೊಬೈಲ್”
“ಈ ಆಸ್ಪತ್ರೆಯಲ್ಲಿ ವೈದ್ಯರು ಮಕ್ಕಳಿಗೆ ಚೆನ್ನಾಗಿ ಚಿಕಿತ್ಸೆ ಕೊಡುತ್ತಾರೆನ್ನುವ ಕಾರಣಕ್ಕೆ ಇಲ್ಲಿಯೇ ಚಿಕಿತ್ಸೆ ಕೊಡಿಸುತ್ತ ಬಂದಿದ್ದೇವೆ. ಆದರೆ, ಇಲ್ಲಿನ ಸಿಬ್ಬಂದಿ, ಕಾರ್ಯನಿರ್ವಹಿಸುವ ಬಹಳಷ್ಟು ಸಮಯದಲ್ಲಿ ಬಾಯಲ್ಲಿ ಗುಟ್ಕಾ, ಕೈಯಲ್ಲಿ ಮೊಬೈಲ್ ಇಲ್ಲದೇ ಇರುವುದಿಲ್ಲ. ಗುಟ್ಕಾ ವಾಸನೆಯ ನಡುವೆಯೇ ಚಿಕಿತ್ಸೆ ಕೊಡಿಸಲು ಮುಜುಗರವಾಗುತ್ತದೆ. ನಾವು ಹರಕೆ ಕಟ್ಟಿ ಮೂರ‍್ನಾಲ್ಕು ವರ್ಷದ ನಂತರ ನಮಗೆ ಮಗು ಆಗಿದೆ, ಈ ರೀತಿ ಆಸ್ಪತ್ರೆಯಲ್ಲಿ ವರ್ತಿಸಿದರೆ, ನಮ್ಮ ಮಗುವಿನ ಆರೋಗ್ಯದಲ್ಲಿ ಏನಾದರು ತೊಂದರೆಯಾದರೆ ಹೊಣೆ ಯಾರು” ಎಂದು ಮಗುವಿನ ಪಾಲಕರು ಅಳಲು ತೋಡಿಕೊಂಡಿದ್ದಾರೆ.
“ವೈದ್ಯರು ಚೆನ್ನಾಗಿದ್ದಾರೆ, ಆದರೆ ಆಸ್ಪತ್ರೆ ಮಾತ್ರ ನೀಟಾಗಿಲ್ಲ”
“ಈ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಕೈಗುಣ ಚೆನ್ನಾಗಿದೆ, ಆದರೆ ಆಸ್ಪತ್ರೆ ಮಾತ್ರ ನೀಟಾಗಿಲ್ಲ. ಅಲ್ಲದೇ ಇಲ್ಲಿನ ಸಿಬ್ಬಂದಿಗಳ ಬೇಜವಾಬ್ದಾರಿ ಹೆಚ್ಚಿದೆ. ಹೀಗಾದರೆ ಇಲ್ಲಿಗೆ ಮಕ್ಕಳನ್ನು ಹೇಗೆ ಕರೆದುಕೊಂಡು ಬರಬೇಕು. ಮಗುವಿಗೆ ಚಿಕಿತ್ಸೆ ಪಡೆದುಕೊಂಡ ನಂತರ ಸಿಬ್ಬಂದಿಯ ಬೇಜವಾಬ್ದಾರಿಯನ್ನು ಆಸ್ಪತ್ರೆಯ ವೈದ್ಯರಿಗೆ ಮುಖಃತ ಹೇಳಿ, ಮಗುವಿಗೆ ಸಿಬ್ಬಂದಿ ಕಟ್ಟಿದ್ದ ವೈಯರ್‌ನ್ನು ಅವರಿಗೆ ತೋರಿಸಿ ಬಂದಿರುವೆ. ಇದಕ್ಕೆ ವೈದ್ಯರು, ಆಸ್ಪತ್ರೆಯ ಸಿಬ್ಬಂದಿಗೆ ಎಚ್ಚರಿಕೆ ನೀಡುವೆ ಎಂದು ಸಮಜಾಯಿಷಿ ನೀಡಿ ಕಳುಹಿಸಿದರು” ಎಂದು ಅವರು ತಿಳಿಸಿದ್ದಾರೆ.
ನಿರ್ಲಕ್ಷ್ಯ, ಪಾಲಕರ ಆರೋಪ
“ಕೆಪಿಎಂಇ(ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ) ಕಾಯ್ದೆ ಅನ್ವಯ ಖಾಸಗಿ ಆಸ್ಪತ್ರೆಗಳ ಕಾರ್ಯನಿರ್ವಹಣೆ ಕುರಿತಂತೆ ಹಲವು ನಿಯಮಗಳು ಇದ್ದು, ಈ ಕುರಿತು ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಸಿಬ್ಬಂದಿ ಮತ್ತು ಕೆಲ ಆಸ್ಪತ್ರೆಯ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದ ರೋಗಿಗಳು ಸಮಸ್ಯೆ ಅನುಭವಿಸುವಂತಾಗಿದೆ.” ಎಂದು ಪಾಲಕರು ಆರೋಪಿಸಿದ್ದಾರೆ.


Spread the love

Leave a Reply

Your email address will not be published. Required fields are marked *