ನಮ್ಮ ಸಿಂಧನೂರು, ಏಪ್ರಿಲ್ 08
ಸುಕಾಲಪೇಟೆಯಲ್ಲಿ 11-07-2020ರಂದು ಐದು ಜನರನ್ನು ಬರ್ಬರವಾಗಿ ಕೊಲೆ ಮಾಡಿದ ಹಾಗೂ ಇಬ್ಬರ ಕೊಲೆಗೆ ಯತ್ನಿಸಿದ ಕೇಸ್‌ಗೆ ಸಂಬಂಧಿಸಿದಂತೆ, ಪ್ರಕರಣದ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಬಿ.ಬಿ.ಜಕಾತಿ, 3ನೇ ಅಧಿಕ ಜಿಲ್ಲಾ & ಸತ್ರ ನ್ಯಾಯಾಲಯ ರಾಯಚೂರು, ಪೀಠಾಸೀನ ಸಿಂಧನೂರು ಇವರು ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ ದಿನಾಂಕ: 08-04-2025 ರಂದು 01 ರಿಂದ 03ನೇ ಆರೋಪಿತರಿಗೆ ಮರಣ ದಂಡನೆ ಹಾಗೂ ತಲಾ 47,000 ರೂ ದಂಡ ಹಾಗೂ 04 ರಿಂದ 12ನೇ ಆರೋಪಿತರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ 97,500 ರೂ ದಂಡ ವಿಧಿಸಿ ತೀರ್ಪ ನೀಡಿರುತ್ತಾರೆ.
ಶಿಕ್ಷೆಗೊಳಗಾದವರು
1) ಸಣ್ಣ ಫಕೀರಪ್ಪ ತಂದೆ ಸೋಮಪ್ಪ ಕೊನದವರು, 2) ಅಮ್ಮಣ್ಣ @ ಅಂಬಣ್ಣ ತಂದೆ ಸೋಮಪ್ಪ ಕೊನದವರ, 3) ಸೋಮಶೇಕರ್ ತಂದೆ ಹೀರೆಪಕೀರಪ್ಪ @ ದೊಡ್ಡ ಪಕೀರಪ್ಪ ಕೊನದವರು, 4) ರೇಖಾ @ ಸಿದ್ದಮ್ಮ ಗಂಡ ಸಣ್ಣ ಪಕೀರಪ್ಪ ಕೊನದವರು, 5) ಗಂಗಮ್ಮ ತಂದೆ ಅಂಬಣ್ಣ ಹೆಬ್ಬಾಳ, 6) ದೊಡ್ಡ ಪಕೀರಪ್ಪ ತಂದೆ ಸೋಮಪ್ಪ ಕೊನದವರು, 7) ಹನುಮಂತ ತಂದೆ ಸೋಮಪ್ಪ ಕೊನದವರು, 8) ಹೋನುರಪ್ಪ ತಂದೆ ಸೋಮಪ್ಪ ಕೊನದವರು, 9) ಬಸಲಿಂಗಪ್ಪ ತಂದೆ ದೊಡ್ಡ ಪಕೀರಪ್ಪ ಕೊನದವರು, 10) ಅಮರೇಶ್ ತಂದೆ ಮಲ್ಲಪ್ಪ, 11) ಶಿವರಾಜ ತಂದೆ ಅಂಬಣ್ಣ ಹೆಬ್ಬಾಳ, 12) ಪರಸಪ್ಪ ತಂದೆ ಜಂಬುಲಿಂಗಪ್ಪ ಸಿದ್ದಾಪುರ ಇವರೇ ನ್ಯಾಯಾಲಯದಿಂದ ಶಿಕ್ಷೆಗೊಳಗಾದವರು.
ಏನಿದು ಪ್ರಕರಣ ?
ನಗರದ ಸುಕಾಲಪೇಟೆಯ ಈರಪ್ಪ ಕೋಣದ್ ಅವರ ಪುತ್ರ ಮೌನೇಶ, ಅದೇ ಓಣಿಯ ಸಣ್ಣ ಫಕೀರಪ್ಪನ ಪುತ್ರಿ ಮಂಜುಳಾ ಎರಡು ಮನೆಗಳವರ ತೀವ್ರ ವಿರೋಧದ ಮಧ್ಯೆ ವಿವಾಹವಾಗಿದ್ದರು. ವಿವಾಹದ ನಂತರ ಎರಡು ಕುಟುಂಬಗಳ ಮಧ್ಯೆ ಪ್ರತಿನಿತ್ಯ ವಾಗ್ವಾದ, ಜಗಳ ಸಾಮಾನ್ಯವಾಗಿತ್ತು. ಜುಲೈ 11-7-2020ರಂದು ಸಂಜೆ ದೊಡ್ಡ ಫಕೀರಪ್ಪ ಕೋಣದ್ ಸೇರಿದಂತೆ ಅವರ ಸಹೋದರರಾದ ಸಣ್ಣ ಫಕೀರಪ್ಪ, ಅಂಬಣ್ಣ, ಸೋಮಶೇಖರ ಮತ್ತಿತರರು ಕೊಡಲಿ, ಮಚ್ಚು, ಬಡಿಗೆ ಸೇರಿದಂತೆ ಮಾರಕಾಸ್ತ್ರಗಳಿಂದ ಈರಪ್ಪ ಕೋಣದ್ ಮನೆಗೆ ನುಗ್ಗಿ ಎಲ್ಲರನ್ನೂ ಅಟ್ಟಾಡಿಸಿ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ಐವರು ಕೊಲೆಗೀಡಾಗಿ, ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ದಾಳಿಯ ಮುನ್ಸೂಚನೆ ಅರಿತಿದ್ದ, ಪ್ರೇಮಿಸಿ ವಿವಾಹವಾಗಿದ್ದ ಮೌನೇಶ ಮತ್ತು ಮಂಜುಳಾ ಶಹರ ಪೊಲೀಸ್ ಠಾಣೆಗೆ ತೆರಳಿ ಆಶ್ರಯ ಪಡೆದಿದ್ದರು.
ಬೆಚ್ಚಿಬೀಳಿಸಿದ್ದ ಕೊಲೆ ಘಟನೆ
ಸುಕಾಲಪೇಟೆಯಲ್ಲಿ ಕುಟುಂಬವೊಂದರ ಮೇಲೆ ಆರೋಪಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹಲವರನ್ನು ಕೊಚ್ಚಿ ಹಾಕಿದ ಪೈಶಾಚಿಕ ಘಟನೆ ಇಡೀ ನಗರಕ್ಕೆ ಅಂದು ಕಾಳ್ಗಿಚ್ಚಿನಂತೆ ಹಬ್ಬಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ್ದಲ್ಲದೇ ಇಡೀ ರಾಜ್ಯದ ಗಮನ ಸೆಳೆದಿತ್ತು. ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿತರ ವಿರುದ್ಧ ಅಂದಿನ ತನಿಖಾಧಿಕಾರಿ ಸಿಪಿಐ ಬಾಲಚಂದ್ರ ಲಕ್ಕಂ ಇವರು ತನಿಖೆ ಕೈಗೊಂಡು ದೋಷಾರೋಪಣ ಸಲ್ಲಿಸಿದ್ದರು. ಸರಕಾರದ ಪರವಾಗಿ ಆರ್.ಎ.ಗಡಕರಿ ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದರು. ಕೆಂಚಮ್ಮ ಮಹಿಳಾ ಪಿ.ಸಿ ಹಾಗೂ ಬೂದೆಪ್ಪ ಪಿಸಿ ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಯಾವ್ಯಾವ ಸೆಕ್ಷನ್‌ನಡಿ ಪ್ರಕರಣ ?
ನಗರದ ಸುಕಾಲಪೇಟೆಯಲ್ಲಿ ನಡೆದ ಬರ್ಬರ ಕೊಲೆ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಅಂದು ಶಹರ ಪೊಲೀಸ್ ಠಾಣೆ ಪೊಲೀಸರು 143, 147, 148, 120ಃ, 504, 448, 427, 307, 302, 114 ಹಾಗೂ 149 ರಡಿ ಕೇಸ್ ದಾಖಲಿಸಿ, ತನಿಖೆಗೆ ಮುಂದಾಗಿದ್ದರು.
