ಸಿಂಧನೂರು : ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ ವಿವಾದ, ಕೋರ್ಟ್ ವಿಚಾರಣೆ ಸೆ.4ಕ್ಕೆ ಮುಂದೂಡಿಕೆ

Spread the love

ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಆಗಸ್ಟ್ 31

ತೀವ್ರ ಕುತೂಹಲ ಕೆರಳಿಸಿರುವ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲು ವಿವಾದ ಕೋರ್ಟ್ ಮೆಟ್ಟಿಲೇರಿದ್ದು, ಕಲಬುರ್ಗಿ ಹೈಕೋರ್ಟ್ ಪೀಠ ಸೆಪ್ಟೆಂಬರ್ 4ಕ್ಕೆ ವಿಚಾರಣೆ ಮುಂದೂಡಿದೆ. ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ನಿಟ್ಟಿನಲ್ಲಿ ಆಗಸ್ಟ್ 14ರಂದು ಹೈಕೋರ್ಟ್ ಕಲಬುರಗಿ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿ ಆಕ್ಷೇಪಣೆಗಳಿದ್ದರೆ ಆಗಸ್ಟ್ 26 ರೊಳಗಾಗಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿತ್ತು. ತದನಂತರ ಆಗಸ್ಟ್ 29ರಂದು ವಿಚಾರಣೆಯನ್ನು ನ್ಯಾಯಾಲಯ ಕಾಯ್ದಿರಿಸಿತ್ತು. ಈಗ ಪುನಃ ವಿಚಾರಣೆ ಸೆಪ್ಟೆಂಬರ್ 4ನೇ ತಾರೀಖಿಗೆ ಮುಂದೂಡಿಕೆಯಾಗಿದೆ.
ಗಿಣಿವಾರ ಅವರ ವಾದ ಏನು ?
ಸಿಂಧನೂರು ಸಿಟಿಯಲ್ಲಿ ಎಸ್ಟಿ (ಪರಿಶಿಷ್ಟ ಪಂಗಡ) ಸಮುದಾಯದ ಜನಸಂಖ್ಯೆ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಿದೆ. ನಗರಸಭೆಯಲ್ಲಿ ಒಬ್ಬರು ಮಾತ್ರ ಎಸ್ಟಿ ಮಹಿಳಾ ಸದಸ್ಯರಿದ್ದಾರೆ. ಇಲ್ಲಿಯವರೆಗೆ ಎಸ್ಸಿ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಅಧ್ಯಕ್ಷ ಸ್ಥಾನದ ಮೀಸಲು ಸಿಗದೇ ಅನ್ಯಾಯವಾಗಿದೆ ಎಂದು ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಿಯಾಂಕ ಅವರ ಕಡೆಯಿಂದಲೂ ಹೈಕೋರ್ಟ್ ಮೊರೆ ?
ನಗರಸಭೆ ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಿರಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಕಾಂಗ್ರೆಸ್‌ನಿAದ ಶೇಖರಪ್ಪ ಗಿಣಿವಾರ ಅವರು ಹೈಕೋರ್ಟ್ನಲ್ಲಿ ದಾವೆ ಹೂಡಿದ ಬೆನ್ನಲ್ಲೇ, ಜೆಡಿಎಸ್‌ನಿಂದ ವಿಜೇತರಾಗಿರುವ ಪ್ರಿಯಾಂಕ ಅವರೂ ಕೂಡ ಹೈಕೋರ್ಟ್ ಮೊರೆ ಹೋಗಿದ್ದಾರೆಂದು ಹೇಳಲಾಗುತ್ತಿದೆ.
ನಗರಸಭೆಯಲ್ಲಿ ಪಕ್ಷಗಳ ಬಲಾಬಲ
ಸಿಂಧನೂರು ನಗರಸಭೆಯ ಒಟ್ಟು 31 ವಾರ್ಡ್ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ 20 ಸದಸ್ಯರಿದ್ದು, ಜೆಡಿಎಸ್‌ನ 8 ಹಾಗೂ ಬಿಜೆಪಿಯ ಇಬ್ಬರು ಸದಸ್ಯರಿದ್ದಾರೆ.6ನೇ ವಾರ್ಡ್ ಕಾಂಗ್ರೆಸ್ ಸದಸ್ಯರೊಬ್ಬರು ಮೃತಪಟ್ಟಿದ್ದರಿಂದ ಆ ಸ್ಥಾನಕ್ಕೆ ಇನ್ನೂ ಚುನಾವಣೆ ನಡೆದಿಲ್ಲ. ಇನ್ನು ಸಂಸದರ ಒಂದು ಮತ ಹಾಗೂ ಶಾಸಕರ ಒಂದು ಮತವೂ ಕೂಡ ಕಾಂಗ್ರೆಸ್‌ಗೆ ದೊರೆಯಲಿದೆ. ಹೀಗಾಗಿ ನಗರಸಭೆಯಲ್ಲಿ ಕಾಂಗ್ರೆಸ್‌ಗೆ 22 ಸ್ಥಾನಗಳ ಮೂಲಕ ಸರಳ ಬಹುಮತ ಹೊಂದಿದೆ.
ಕಾಂಗ್ರೆಸ್‌ಗೆ ಬಿಸಿ ತುಪ್ಪ
ನಗರಸಭೆಯಲ್ಲಿ ಕಾಂಗ್ರೆಸ್‌ಗೆ ಸರಳ ಬಹುಮತ ಇದ್ದರೂ ಅಧ್ಯಕ್ಷ ಸ್ಥಾನ ಕೈತಪ್ಪಲಿದೆ ಎನ್ನುವ ಭಾವ ಕಾಡುತ್ತಿದ್ದು, ಬಿಸಿತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಎಸ್ಟಿ ಮೀಸಲಿನಡಿ ವಿಜೇತರಾಗಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿರುವ ಪ್ರಿಯಾಂಕ ಅವರನ್ನು ಹೇಗಾದರೂ ಮಾಡಿ ಕಾಂಗ್ರೆಸ್‌ಗೆ ಕರೆತರಬೇಕೆನ್ನುವ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಹೈಕೋರ್ಟ್ ತೀರ್ಪಿನ ನಂತರ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ.


Spread the love

Leave a Reply

Your email address will not be published. Required fields are marked *