ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 17
ನಗರದ ಪ್ರಮುಖ ರಸ್ತೆಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ಬೀದಿ ಬದಿ ವ್ಯಾಪಾರಸ್ಥರನ್ನು ಕಳೆದ ಡಿಸೆಂಬರ್ನಲ್ಲಿ ತೆರವುಗೊಳಿಸಿದ ನಂತರ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿದ್ದಾರೆ. ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾದ ಎಲ್ಲ ಅರ್ಹ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು, ಬೀದಿ ಬದಿ ವ್ಯಾಪಾರಸ್ಥರ ಹೋರಾಟ ಸಮಿತಿಯಿಂದ ನಗರಸಭೆ ಪೌರಾಯುಕ್ತರನ್ನು ಸೋಮವಾರ ಬೆಳಿಗ್ಗೆ ಭೇಟಿ ಮಾಡಿ ಒತ್ತಾಯಿಸಲಾಯಿತು.
ಕಳೆದ ಡಿಸೆಂಬರ್ನಿಂದ ಇಲ್ಲಿಯವರೆಗೂ 3 ತಿಂಗಳಿನಿAದ ಬೀದಿ ಬದಿ ವ್ಯಾಪಾರಸ್ಥರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ತರಕಾರಿ, ಹಣ್ಣು, ಹೋಟೆಲ್, ಚಹಾ ಅಂಗಡಿ, ಬಟ್ಟೆ ಅಂಗಡಿ, ರೆಗ್ಜಿನ್ ವರ್ಕ್ಸ್, ಇಡ್ಲಿ ಬಂಡಿ, ಹೂವಿನ ಅಂಗಡಿ, ಪಂಚರ್ ಶಾಪ್, ಮೆಕಾನಿಕ್ ಅಂಗಡಿ, ಕರಕುಶಲ ಅಂಗಡಿ ಸೇರಿದಂತೆ ಸಣ್ಣಪುಟ್ಟ ವಿವಿಧ ಬಗೆಯ ಡಬ್ಬಾ ಅಂಗಡಿ ವ್ಯಾಪಾರಿಗಳು ಜೀವನ ನಿರ್ವಹಣೆಗೆ ಆದಾಯವಿಲ್ಲದೇ ಇತ್ತ ಬ್ಯಾಂಕ್ನ ಸಾಲ ತೀರಿಸಲಾಗದೇ ತೊಂದರೆಗೆ ಸಿಲುಕಿದ್ದು, ಇವರ ಕುಟುಂಬಗಳು ಬಿಕ್ಕಟ್ಟು ಎದುರಿಸುತ್ತಿವೆ. ಬಹುತೇಕ ಸಣ್ಣಪುಟ್ಟ ವ್ಯಾಪಾರಿಗಳು ನಿರುದ್ಯೋಗಿಗಳಾಗಿದ್ದಾರೆ. ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗು ನಿಯಂತ್ರಣ ಕಾಯ್ದೆ, 2014ರ ಅನ್ವಯ ಹಾಗೂ ಮಾನವೀಯತೆ ದೃಷ್ಟಿಯಿಂದ ಕೂಡಲೇ ಇವರಿಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದು ಹೋರಾಟ ಸಮಿತಿಯವರು ಪೌರಾಯುಕ್ತರಲ್ಲಿ ಮನವಿ ಮಾಡಿದರು.

ಮೂರು ಪ್ರಮುಖ ಹಕ್ಕೊತ್ತಾಯ
ರಸ್ತೆ ಬಿಟ್ಟು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಅಲ್ಲಲ್ಲಿ ಹಾಗೂ ಉಪ ದಾರಿಗಳಲ್ಲಿ ಕೆಲವರು ವ್ಯಾಪಾರ ಮಾಡುತ್ತಿದ್ದರೂ ಪೊಲೀಸರು ಅಂತವರ ಮೇಲೆ ಹಲ್ಲೆ ನಡೆಸಿದ್ದಾರೆ. ತಳ್ಳು ಬಂಡಿಗಳ ವ್ಯಾಪಾರಸ್ಥರ ಮೇಲೂರು ನಿರಂತರ ಕಿರುಕುಳ ಮುಂದುವರಿದಿದೆ ಎಂದು ಗಮನ ಸೆಳೆದ ಹೋರಾಟಗಾರರು, ಬೀದಿ ಬದಿ ವ್ಯಾಪಾರಸ್ಥರ ಮೇಲೆ ಪೊಲೀಸ್ ಕಿರುಕುಳ ತಪ್ಪಿಸಬೇಕು, ರಸ್ತೆ ಸುರಕ್ಷತಾ ನಿಯಮಗಳನ್ವಯ, ಬೀದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗು ನಿಯಂತ್ರಣ ಕಾಯ್ದೆ, 2014ರಂತೆ ತಳ್ಳುಬಂಡಿಗಳನ್ನಿಟ್ಟುಕೊAಡು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು ಹಾಗೂ ಅಗತ್ಯ ಸ್ಥಳಗಳನ್ನು ಗುರುತಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಅದಕ್ಕೂ ಮುನ್ನ ತಾತ್ಕಾಲಿಕ ವ್ಯವಸ್ಥೆಗೆ ಮುಂದಾಗಬೇಕು ಎಂದು ಸಂಚಾಲಕರಾದ ಡಿ.ಎಚ್.ಪೂಜಾರ್ ಹಾಗೂ ಚಂದ್ರಶೇಖರ ಗೊರಬಾಳ ಅವರು ಹಕ್ಕೊತ್ತಾಯ ಮಂಡಿಸಿದರು.
ಹಂತ ಹಂತವಾಗಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ: ಪೌರಾಯುಕ್ತರ ಭರವಸೆ
ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಶಾಸಕರು ಹಾಗೂ ತಾವು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ. ಜಾಗದ ಅಭಾವ, ಅನ್ಯ ಇಲಾಖೆಯ ಜಾಗಕ್ಕೆ ಲೀಸ್ ಪ್ರಕ್ರಿಯೆಗೆ ಹೋಗಬೇಕಿರುವುದು ಸೇರಿದಂತೆ ಹಲವು ತಾಂತ್ರಿಕ ತೊಡಕುಗಳು ಇದ್ದು, ಇದರ ನಡುವೆಯೂ ಜಿಲ್ಲಾಡಳಿತ, ನಗರಸಭೆಯಿಂದ ಹಲವು ಪ್ರಯತ್ನಗಳು ನಡೆಯುತ್ತಿವೆ. ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ವ್ಯಾಪಾರಸ್ಥರ ಮೇಲೆ ಕಿರುಕುಳ ನಡೆಯುತ್ತಿದೆ ಎಂಬ ಬಗ್ಗೆ ಆರೋಪಗಳು ಕೇಳಿಬಂದಿದ್ದು, ಈ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು ಎಂದು ಪೌರಾಯುಕ್ತ ಗುಂಡೂರು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜ್, ಪ್ರತಿಪಕ್ಷದ ನಾಯಕ ಚಂದ್ರಶೇಖರ ಮೈಲಾರ, ಮುಖಂಡರಾದ ದೇವೇಂದ್ರಗೌಡ, ಹುಸೇನ್ಸಾಬ್, ಬಸವರಾಜ ಬಾದರ್ಲಿ, ಬಸವಂತರಾಯಗೌಡ ಪಾಟೀಲ್, ಡಾ.ವಸೀಮ್, ಮಂಜುನಾಥ ಗಾಂಧಿನಗರ, ಬಿ.ಎನ್.ಯರದಿಹಾಳ, ಎಂ.ಗೋಪಾಲಕೃಷ್ಣ, ರಮೇಶ್ ಪಾಟೀಲ್ ಬೇರಿಗಿ, ಅಮೀನ್ಸಾಬ್ ನದಾಫ್, ಸಮ್ಮದ್ ಚೌದ್ರಿ, ಕೃಷ್ಣಮೂರ್ತಿ, ಬಸವರಾಜ್ ಹಸಮಕಲ್ ಇದ್ದರು.