ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 9
ನಗರದ ಟೌನ್‌ಹಾಲ್‌ನಲ್ಲಿ 11-01-2026 ಭಾನುವಾರದಂದು ಮತದಾರರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವಿರೋಧಿ ಹೋರಾಟ ಸಮಿತಿಯಿಂದ ಬೆಳಿಗ್ಗೆ 10.30 ಗಂಟೆಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಂವಾದದಲ್ಲಿ ಖ್ಯಾತ ಸಾಮಾಜಿಕ ಕಾರ್ಯಕರ್ತ ಹಾಗೂ ಚಿಂತಕ ಶಿವಸುಂದರ್ ಅವರು ಭಾಗವಹಿಸಲಿದ್ದು, ಎಡ ಪಕ್ಷಗಳು, ಪ್ರಗತಿಪರ, ಜನಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಮಹಿಳೆಯರು, ವಿದ್ಯಾರ್ಥಿ, ಯುವಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮತದಾರರು ಯಾವುದೇ ಕಾರಣಕ್ಕೂ ಮತದಾನದ ಹಕ್ಕಿನಿಂತ ವಂಚಿತರಾಗಬಾರದು: ಚಂದ್ರಶೇಖರ ಗೊರಬಾಳ
ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಉಪನ್ಯಾಸಕ ಚಂದ್ರಶೇಖರ ಗೊರಬಾಳ ಎಸ್‌ಐಆರ್ ನೆಪದಲ್ಲಿ ಕೆಲ ದಾಖಲೆಗಳಿಲ್ಲದ ಕಾರಣಕ್ಕೆ ದಲಿತ, ಹಿಂದುಳಿದ, ಆದಿವಾಸಿ, ಅಲ್ಪಸಂಖ್ಯಾತ ಹಾಗೂ ಶೋಷಿತ ಸಮುದಾಯಗಳ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕೆಲಸ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಎಸ್‌ಐಆರ್ ಮುಕ್ತಾಯಗೊಂಡಿದ್ದು, 2.89 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ವರದಿ ಇದೆ. ಮತ ಹಾಕುವ ಹಕ್ಕನ್ನೇ ವ್ಯವಸ್ಥಿತವಾಗಿ ಪ್ರಜೆಗಳಿಂದ ಕಿತ್ತುಕೊಳ್ಳುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದಲಿತ, ಆದಿವಾಸಿ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರ ಮತದಾನದ ಹಕ್ಕಿಗೂ ಸಂಚಕಾರ ಬಂದಿದೆ: ಎಂ.ಗಂಗಾಧರ ಆರೋಪ
ಸಿಪಿಐ(ಎಂಎಲ್) ರೆಡ್‌ಸ್ಟಾರ್‌ನ ಎಂ.ಗಂಗಾಧರ ಮಾತನಾಡಿ, ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿ ಉಳಿದಿಲ್ಲ. ಬಿಜೆಪಿಯ ಕೈಗೊಂಬೆಯಾಗಿ ಮಾರ್ಪಟ್ಟಿದೆ. ಹೀಗಾಗಿ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರ ಮತದಾನದ ಹಕ್ಕಿಗೂ ಸಂಚಕಾರ ಬಂದಿದೆ. ಈಗಾಗಲೇ ಬಿಹಾರದಲ್ಲಿ ಎಸ್‌ಐಆರ್ ಮೂಲಕ ಅವಾಂತರ ಸೃಷ್ಟಿಮಾಡಿದ್ದಲ್ಲದೇ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಕರ್ನಾಟಕ ಹೀಗೆ ಹಲವು ರಾಜ್ಯಗಳಲ್ಲಿ ಸಂವಿಧಾನ ವಿರೋಧಿ ಎಸ್‌ಐಆರ್ ನಡೆಸಲು ಹೊರಟಿದೆ ಎಂದು ಹರಿಹಾಯ್ದರು.
ನಮ್ಮ ಮತ ನಮ್ಮ ಹಕ್ಕು, ಸಂವಿಧಾನ ನಮ್ಮ ಶಕ್ತಿ: ಬಾಷುಮಿಯಾ
ಸಿಪಿಐನ ಭಾಷುಮಿಯಾ ಅವರು ಮಾತನಾಡಿ, ನಮ್ಮ ಮತ ನಮ್ಮ ಹಕ್ಕು, ಸಂವಿಧಾನ ನಮ್ಮ ಶಕ್ತಿ ಎನ್ನುವ ಘೋಷವಾಕ್ಯದಡಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಜನಪರ ಶಕ್ತಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ಅಧ್ಯಕ್ಷ ಹುಸೇನ್‌ಸಾಬ್ ಮಾತನಾಡಿ, ಕೇಂದ್ರ ಸರ್ಕಾರವು ಎಸ್‌ಐಆರ್ ಮೂಲಕ ಅಲ್ಪಸಂಖ್ಯಾತ ಸಮುದಾಯದವರ ಮತದಾನದ ಹಕ್ಕುಗಳನ್ನು ಕಿತ್ತುಕೊಳ್ಳಲು ನೋಡುತ್ತಿದೆ. ಯಾವುದೇ ದೇಶದ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಇರಬೇಕು. ಮತದಾನದ ಹಕ್ಕನ್ನು ನಿರಾಕರಿಸುವುದು ಮತ್ತು ಆ ಹಕ್ಕಿನಿಂದ ವಂಚಿಸವುದು ಸಂವಿಧಾನ ವಿರೋಧಿ ಕ್ರಮವಾಗಿವಾಗಿದೆ. ಪ್ಯಾಶಿಷ್ಟ ಬಿಜೆಪಿ ಸರ್ಕಾರ ಇಂತಹ ಧೋರಣೆಯನ್ನು ಅನುಸರಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ರೈತ ಮುಖಂಡರಾದ ಅಮೀನ್‌ಪಾಷಾ ದಿದ್ದಿಗಿ, ಬಸವರಾಜ ಗೋಡಿಹಾಳ, ಬಾಷುಮಿಯಾ, ಬಾಬರ್‌ಪಾಷಾ ವಕೀಲರು, ಡಿ.ಎಚ್.ಕಂಬಳಿ, ಬಸವಂತರಾಯಗೌಡ ಕಲ್ಲೂರು, ದೇವೇಂದ್ರಗೌಡ, ಕರೇಗೌಡ ಕುರಕುಂದಿ, ಜಾಫರ್ ಜಾಗೀರದಾರ್, ಮಂಜುನಾಥ ಗಾಂಧಿನಗರ, ಕೃಷ್ಣಮೂರ್ತಿ ಧುಮತಿ, ಅಶೋಕ ನಂಜಲದಿನ್ನಿ, ಎಂ.ಗೋಪಾಲಕೃಷ್ಣ, ಜಿಲಾನಿಪಾಷಾ, ಎಚ್.ಎಫ್.ಮಸ್ಕಿ, ಬಿ.ಎನ್.ಯರದಿಹಾಳ, ಅಮೀನ್‌ಸಾಬ್ ನದಾಫ್, ಬಸವರಾಜ ಬಾದರ್ಲಿ, ಮೌನೇಶ ಜಾಲವಾಡಗಿ, ಜಗದೀಶ್ ಸುಕಾಲಪೇಟೆ, ಚಾಂದ್‌ಪಾಷಾ ಜಾಗೀರದಾರ, ದಾವಲ್‌ಸಾಬ್ ದೊಡ್ಮನಿ, ಅಬುಲೈಸ್ ನಾಯ್ಕ, ಬಸವರಾಜ ಹಸಮಕಲ್ ಸೇರಿದಂತೆ ಇನ್ನಿತರರು ಇದ್ದರು.

