ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 23
ಸಾರ್ವಜನಿಕರ ಹಾಗೂ ಕನ್ನಡಪರ ಸಂಘಟನೆಗಳ ನಿರಂತರ ಹೋರಾಟ ಕೈಗೊಂಡ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ (ಡಿಎಚ್‌ಒ) ಡಾ.ಸುರೇಂದ್ರ ಬಾಬು ಅವರು ನಗರದ ಸಾರ್ವಜನಿಕರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು. ಡಿಎಚ್‌ಒ ಭೇಟಿ ನೀಡುತ್ತಿದ್ದಂತೆ, ರೋಗಿಗಳ ಕಡೆಯವರು ಮತ್ತು ರೋಗಿಗಳು ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿ, ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕರ್ತವ್ಯ ವೇಳೆಗೆ ಕೆಲಸಕ್ಕೆ ಹಾಜರಾಗದ ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿಯನ್ನು ಖಂಡಿಸಿ, ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ದಿನಾಂಕ: 03-09-2024ರಂದು ಮಂಗಳವಾರದಂದು ನಮ್ಮ ಕರ್ನಾಟಕ ಸೇನೆಯ ಮುಖಂಡರು ಹಾಗೂ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಎಂಒ ಅವರ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದ ವೈದ್ಯರು ಹಾಗೂ ಸಿಬ್ಬಂದಿಯ ಮೇಲೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ನಂತರ ಕಾರ್ಯಕರ್ತರು ಹೋರಾಟ ಕೈಬಿಟ್ಟಿದ್ದರು. ಆದರೆ ಆಸ್ಪತ್ರೆಯಲ್ಲಿ ಯತಾಸ್ಥಿತಿ ಮುಂದುವರಿದಿದೆ ಎಂದು ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಆರೋಪಿಸಿದ್ದರು.
ಅವ್ಯವಸ್ಥೆ ಸರಿಪಡಿಸದಿದ್ದರೆ ಅನಿರ್ದಿಷ್ಟ ಹೋರಾಟದ ಎಚ್ಚರಿಕೆ
15 ದಿನದೊಳಗೆ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಸರಿಪಡಿಸಿ, ಕರ್ತವ್ಯಲೋಪ ಎಸಗುವ ಸಿಬ್ಬಂದಿ ಹಾಗೂ ವೈದ್ಯರ ಮೇಲೆ ಶಿಸ್ತುಕ್ರಮ ಜರುಗಿಸದೇ ಹೋದರೆ ಸಂಘಟನೆಯಿಂದ ತಹಸೀಲ್ ಕಾರ್ಯಾಲಯದ ಮುಂದೆ ಅನಿರ್ದಿಷ್ಟ ಹೋರಾಟ ನಡೆಸುವುದಾಗಿ ಎಚ್ಚರಿಕೆಯೊಂದಿಗೆ ವಿಧಾನ ಪರಿಷತ್ ಸದಸ್ಯರು, ಎಸಿ, ತಹಸೀಲ್ದಾರ್ ಹಾಗೂ ಡಿಎಚ್‌ಒ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಎಚ್‌ಒ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಯಿ, ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ವೀಕ್ಷಣೆ
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಡಿಎಚ್‌ಒ ಅವರು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ದೂರಿನ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಸಭೆ ನಡೆಸಿದ್ದಾರೆ. ಅಲ್ಲದೇ ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ದಾರೆ.