ನಮ್ಮ ಸಿಂಧನೂರು, ಮೇ 14
ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರ ಕೂಲಿ ಹಣ ಪಾವತಿಯಲ್ಲಿ ತಾರತಮ್ಯ ಮಾಡುತ್ತಿರುವ ದಡೇಸುಗೂರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಜೆಇ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಸರ್ಕಾರ ನಿಗದಿಪಡಿಸಿದ ಕೂಲಿ ಹಣ ಪಾವತಿಸುವಂತೆ ಆಗ್ರಹಿಸಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯಿಂದ ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ತಾ.ಪಂ.ಅವರಿಗೆ ಮನವಿ ಸಲ್ಲಿಸಲಾಯಿತು.
ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಸೇರಿದಂತೆ ಇನ್ನಿತತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸದೇ ಉರಿಬಿಸಿಲಲ್ಲಿ ಕೆಲಸ ಮಾಡಿಸಿ, ಕೂಲಿ ಹಣ ಪಾವತಿಯಲ್ಲಿ ಗ್ರಾ.ಪಂ.ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಕೆಲಸದಲ್ಲಿ ತೊಡಗಿರುವ ಕೂಲಿಕಾರರ ಸಮರ್ಪಕ ಮಾಹಿತಿ ನೀಡಬೇಕಾದ ಜೆಇ, ಸ್ಥಳಕ್ಕೆ ಬರದೇ ತಾಲೂಕು ಕಚೇರಿಯಲ್ಲಿ ಕುಳಿತು, ಅಳತೆ ಬಂದಿಲ್ಲ, ಸರಿಯಾಗಿ ಕೆಲಸ ಮಾಡಿಲ್ಲ ಎಂದು ಮನಬಂದಂತೆ ಕೂಲಿ ಹಾಕುತ್ತಿದ್ದಾರೆ. ಬರಗಾಲದಿಂದ ತತ್ತರಿಸಿರುವ ಕೂಲಿಕಾರರು ಉರಿಬಿಸಿಲಿನಲ್ಲೂ ಕೆಲಸ ಮಾಡಿದರೆ ಪರೋಕ್ಷವಾಗಿ ಅವರ ಕೂಲಿಯನ್ನು ಅಧಿಕಾರಿಗಳು ಕದಿಯುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಕರ್ತವ್ಯಲೋಪ ಎಸಗಿದ ಪಿಡಿಒ, ಜೆಇ ಮೇಲೆ ಕ್ರಮ ಜರುಗಿಸಬೇಕು, ಸರ್ಕಾರ ನಿಗದಿಪಡಿಸಿದ ಕೂಲಿ ಹಣವನ್ನು ಕೂಲಿಕಾರರಿಗೆ ಪಾವತಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ತಾ.ಪಂ.ಇಒ ಅವರನ್ನು ಪ್ರತಿಭಟನಾ ನಿರತರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಸಂಚಾಲಕ ಅಪ್ಪಣ್ಣ ಕಾಂಬ್ಳೆ, ಯಂಕಪ್ಪ ಕೆಂಗಲ್, ರೇಣುಕಾ, ಪಾರ್ವತಿ, ಶಂಕ್ರಪ್ಪ, ಸಣಕೊರಮ, ತಾಹೇರಾ, ಮೌಲನಬಿ, ಹುಸೇನಬಿ, ಮಲ್ಲಯ್ಯ, ಆಶಮ್ಮ, ಆಲಮಪ್ಪ, ಶಾಜ ಸೇರಿದಂತೆ ಇನ್ನಿತರರಿದ್ದರು.