ಲೋಕಲ್ ನ್ಯೂಸ್
ನಮ್ಮ ಸಿಂಧನೂರು, ಆಗಸ್ಟ್ 11
ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ನವಜಾತ ಶಿಶು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತು ಬಾಣಂತಿಯ ಪತಿ ಹಾಗೂ ಪೋಷಕರು ಆರೋಪಿಸಿದ್ದಾರೆ.
“ಮಸ್ಕಿ ತಾಲೂಕಿನ ರಂಗಾಪುರ ಗ್ರಾಮದ ಗರ್ಭಿಣಿ ಪದ್ದಮ್ಮ ಗಂ. ಮುದಕಪ್ಪ ನಾಯಕ ಅವರು ಆಗಸ್ಟ್ 6 ರಂದು ಹೆರಿಗೆಗಾಗಿ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಬೆಳಿಗ್ಗೆ 7 ಗಂಟೆ ಸುಮಾರು ದಾಖಲಾಗಿದ್ದಾರೆ. ಆ ವೇಳೆ ಗರ್ಭಿಣಿಯನ್ನು ತಪಾಸಣೆ ನಡೆಸಿದ ಡ್ಯೂಟಿ ವೈದ್ಯರು ಮಗು ಆರೋಗ್ಯವಾಗಿದ್ದು, 9 ಗಂಟೆಗೆ ತಜ್ಞ ವೈದ್ಯರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅವರ ಸಲಹೆ ಪಡೆದುಕೊಳ್ಳುವಂತೆ ತಿಳಿಸಿ ಹೋಗಿದ್ದಾರೆ. ಆ ನಂತರ ತಡವಾಗಿ ಬಂದ ವೈದ್ಯರು ಗರ್ಭಿಣಿಯನ್ನು ತಪಾಸಣೆ ನಡೆಸಿ, ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ನಾಲ್ಕು ವರ್ಷದ ನಂತರ ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿಗೆ ಬರಸಿಡಿಲು ಬಡಿದಂತಾಗಿದೆ” ಎಂದು ಗರ್ಭಿಣಿಯ ಪೋಷಕರು ತಿಳಿಸಿದ್ದಾರೆ.
ನಿರ್ಲಕ್ಷ್ಯ
“ಸಹಜ ಹೆರಿಗೆ ಆಗುತ್ತದೆ ಹೆದರಬೇಡಿ… ಎಂದು ಹೇಳುತ್ತಲೇ ಹೆರಿಗೆ ವಿಭಾಗದ ಶುಶ್ರೂಷಕಿಯರು ಕಾಲಹರಣ ಮಾಡಿದರು. ಸರಿಯಾದ ಸಮಯಕ್ಕೆ ತಜ್ಞ ವೈದ್ಯರೂ ಕೂಡ ಬರಲಿಲ್ಲ. ಸಮಸ್ಯೆ ಇದ್ದರೆ ಹೇಳಿ, ನಾವು ಇಲ್ಲಿ ಆಗದಿದ್ದರೆ ಬೇರೆ ಆಸ್ಪತ್ರೆಗೆ ಹೋಗುತ್ತೇವೆ. ಅನಿವಾರ್ಯವಿದ್ದರೆ ಸಿಸೇರಿಯನ್ ಆದರೂ ಮಾಡಿ ಎಂದು ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರ ಬಳಿ ಮೂರ್ನಾಲ್ಕು ಬಾರಿ ಹೇಳಿದರೂ, ಸಹಜ ಹೆರಿಗೆ ಆಗುತ್ತದೆ ಎಂದು ನಂಬಿಸಿ ಮಗುವಿನ ಸಾವಿಗೆ ಕಾರಣರಾಗಿದ್ದಾರೆ” ಎಂದು ಮಹಿಳೆಯ ಪತಿ ಮುದುಕಪ್ಪ ನಾಯಕ ಆರೋಪಿಸಿದ್ದಾರೆ.
“ಮಾತೆತ್ತಿದರೆ ವೈದ್ಯರಿಲ್ಲಂತ ಹೇಳ್ತಾರೆ”
“ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೇ ವಿಳಂಬ ಮಾಡಿದ್ದರಿಂದ ಮಗು ಹೊಟ್ಟೆಯಲ್ಲೇ ಮೃತಪಟ್ಟಿದೆ. ಮೃತಪಟ್ಟ ಮಗುವನ್ನು ಹೊರ ತೆಗೆಯುವಲ್ಲಿಯೂ ವಿಳಂಬ ಮಾಡಿದ್ದಲ್ಲದೇ ತಜ್ಞ ವೈದ್ಯರಿಲ್ಲ, ರಿಮ್ಸ್ ಆಸ್ಪತ್ರೆಗೆ ಹೋಗಿ ಎಂದು ಸಬೂಬು ಹೇಳಿದರು. ಆನಂತರ ನರ್ಸ್ಗಳು ಪೂರಕ ಚಿಕಿತ್ಸೆ ನೀಡದೇ ವಿಳಂಬ ಮಾಡಿದ್ದರಿಂದ ಆತಂಕಗೊAಡು, ಆಗಸ್ಟ್ 6ರಂದು ಬೆಳಿಗ್ಗೆಯಿಂದ ರಾತ್ರಿವರೆಗೂ ಕಾದು ಕಾದು ಸಾಕಾಗಿ 10 ಗಂಟೆ ಸುಮಾರು ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದೆವು. ಖಾಸಗಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಮೃತ ಕೂಸನ್ನು ಹೊರತೆಗೆದರು. ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷö್ಯದಿಂದ ಮಗು ಕಳೆದುಕೊಂಡು ದುಃಖದಲ್ಲಿದ್ದ ನಮಗೆ, ಪತ್ನಿಯ ಆರೋಗ್ಯಕ್ಕೂ ಎಲ್ಲಿ ಆಪತ್ತು ಎದುರಾಗಲಿದೆ ಎಂಬ ಆತಂಕ ಉಂಟಾಗಿತ್ತು” ಎಂದು ಪತಿ ಮುದಕಪ್ಪ ಅಳಲು ತೋಡಿಕೊಂಡಿದ್ದಾರೆ.
