ನಮ್ಮ ಸಿಂಧನೂರು, ಮೇ 30
ಹೆರಿಗೆಗೆಂದು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಮಹಿಳೆಯೊಬ್ಬರು ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ಮಹಿಳೆಯರೊಬ್ಬರು ಹೆರಿಗೆಗೆಂದು ದಾಖಲಾಗಿದ್ದಾರೆ. ವೈದ್ಯರು ಇಲ್ಲದ ಸಂದರ್ಭದಲ್ಲಿ, ವೈದ್ಯರ ಸಲಹೆ ಮೇರೆಗೆ ನರ್ಸ್ಗಳೇ ಹೆರಿಗೆ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ. ಹೆರಿಗೆಯಾದ ನಂತರ ವಿಪರೀತ ರಕ್ತಸ್ರಾವದಿಂದ ಮಹಿಳೆ ಬಳಲಿದ್ದಾರೆ. ರಕ್ತಸ್ರಾವ ನಿಲ್ಲದೇ ಹೋದ ಸಂದರ್ಭದಲ್ಲಿ ಆಸ್ಪತ್ರೆಯವರು ಹೆಚ್ಚಿನ ಚಿಕಿತ್ಸೆಗೆ ಬೇರೆಕಡೆ ಕರೆದುಕೊಂಡು ಹೋಗುವಂತೆ ಕುಟುಂಬದವರಿಗೆ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಕುಟುಂಬದವರು ಆಂಬುಲೆನ್ಸ್ ಮೂಲಕ ಬಾಣಂತಿಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ, 3 ದಿನ ಅಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ. ತದನಂತರ ಬಾಣಂತಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ಚಿಕಿತ್ಸೆಗೆ ತೆರಳುವ ಮಾರ್ಗಮಧ್ಯೆ ಬಾಣಂತಿ ಮೃತಪಟ್ಟಿದ್ದಾರೆ. ಪಾಪು ಉಳಿದುಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಖಾಸಗಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯೊಂದಿಗೆ ವಾಗ್ವಾದ
ಸಿಂಧನೂರು ತವರು ಮನೆಯಾಗಿರುವ ನಗರದ ಯುವತಿಯೊಬ್ಬರನ್ನು ತುರ್ವಿಹಾಳ ಪಟ್ಟಣದ ನಿವಾಸಿಯೊಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಹೆರಿಗೆಗೆಂದು ಬಂದಿದ್ದ ಮಹಿಳೆ ತವರು ಮನೆಯಲ್ಲಿ ವಾಸವಾಗಿದ್ದರು, ಹೆರಿಗೆ ಬೇನೆ ಕಾಣಿಸಿಕೊಂಡ ಬೆನ್ನಲ್ಲೇ ಮಹಿಳೆಯನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಮೃತಪಟ್ಟ ವಿಷಯ ಗೊತ್ತಾಗುತ್ತಿದ್ದಂತೆ, ಪತಿ ಹಾಗೂ ಪತ್ನಿಯ ಕುಟುಂಬದವರು ನಗರದ ಖಾಸಗಿ ಆಸ್ಪತ್ರೆಗೆ ತೆರಳಿ, ವೈದ್ಯರು, ಸಿಬ್ಬಂದಿಯವರೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ. “ನಮಗೆ ಆದ ಹಾಗೆ, ಬೇರೊಬ್ಬರಿಗೆ ಹಾಗದೇ ಇರಲಿ” ಎಂದು ಕುಟುಂಬದವರು ವೈದ್ಯರು, ಸಿಬ್ಬಂದಿ ಮುಂದೆ ಆಕ್ರೋಶ ವ್ಯಕ್ತಪಡಿಸಿ, ನೋವಿನಿಂದಲೇ ವಾಪಸ್ ಹೋಗಿದ್ದಾರೆ ಎಂದು ತಿಳಿದುಬಂದಿದೆ.