ನಮ್ಮ ಸಿಂಧನೂರು, ನವೆಂಬರ್ 9
ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದ ಆರ್.ಎಚ್.ಕ್ಯಾಂಪ್-3ರ ಮಹಿಳೆ ಸಾವಿನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಟೋಬರ್ 30ರಂದು ಹೆರಿಗಾಗಿ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಮಹಿಳೆಯೊಬ್ಬರು ಹೆರಿಗೆ ನಂತರ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದು, ಇದಕ್ಕೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಏನಿದು ಪ್ರಕರಣ ?
ದಿನಾಂಕ: 30-10-2024ರಂದು ರೇಣುಕಮ್ಮ ಗಂಡ ಬಸವರಾಜ ಈಕೆಯನ್ನು ನಗರದ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಹೆರಿಗಾಗಿ ದಾಖಲಿಸಲಾಗಿತ್ತು. ಹೆರಿಗೆಯ ನಂತರ ತೀವ್ರ ರಕ್ತಸ್ರಾವದಿಂದ ರೇಣುಕಮ್ಮ ಬಳಲಿದ್ದಾಳೆಂದು ಹೇಳಲಾಗುತ್ತಿದೆ. ನಂತರ ಆಕೆಯನ್ನು ರಾಯಚೂರಿನ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಿ ಕಳುಹಿಸಲಾಗಿತ್ತು. ದಿನಾಂಕ: 31-10-2024ರಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರೇಣುಕಮ್ಮಳು ಮೃತಪಟ್ಟಿರುತ್ತಾಳೆ. ರೇಣುಕಮ್ಮಳ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ತಾಲೂಕಿನ ಆರ್.ಎಚ್.ಕ್ಯಾಂಪ್-3ರ ಮಹಿಳೆಯೊಬ್ಬರು ಹೆರಿಗೆಯಾದ ನಂತರ ತೀವ್ರ ರಕ್ತಸ್ರಾವದಿಂದ ಬಳಲಿದ್ದರಿಂದ ಕೊನೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಗಿತ್ತು. ಈ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದರು. ಈ ಘಟನೆ ಅಕ್ಟೋಬರ್ 21ರಂದು ನಡೆದಿತ್ತು. ಈ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಅಂತದ್ದೇ ಪ್ರಕರಣ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವೈದ್ಯರ ವಿರುದ್ಧ ಕುಟುಂಬದವರಿಂದ ಡಿಎಚ್‌ಒಗೆ ದೂರು?
ಸಿಂಧನೂರಿನ ತಾಲೂಕು ಆಸ್ಪತ್ರೆಯಲ್ಲಿ ರೇಣುಕಮ್ಮಳ ಸಾವಿಗೆ ಕಾರಣರಾದ ವೈದ್ಯರು ಹಾಗೂ ಸಿಬ್ಬಂದಿಯ ಮೇಲೆ ಉನ್ನತ ತನಿಖೆ ಕೈಗೊಂಡು, ತನಿಖೆ ಆಧಾರದ ಮೇಲೆ ಇವರುಗಳನ್ನು ಅಮಾನತು ಮಾಡಿ, ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಡಿಎಚ್‌ಒ ಡಾ.ಸುರೇಂದ್ರ ಬಾಬು ಅವರಿಗೆ ಪರಶುರಾಮ ಮರಿಯಪ್ಪ ಅಂಕುಶದೊಡ್ಡಿ ದಿನಾಂಕ:04-11-2024ರಂದು ಲಿಖಿತ ದೂರು ಸಲ್ಲಿಸಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು
ಮೃತ ಮಹಿಳೆ ರೇಣುಕಮ್ಮಳ ಪತಿಯ ಸಹೋದರ ಪರುಶುರಾಮ ಮರಿಯಪ್ಪ ಅಂಕುಶದೊಡ್ಡಿ ಅವರು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರು ವೈದ್ಯರ ಮೇಲೆ ದಿನಾಂಕ: 02-11-2024ರಂದು ದೂರು ನೀಡಿದ್ದಾರೆ. ಪೊಲೀಸ್ ಎಫ್‌ಐಆರ್ ದಾಖಲಿಸಿಲ್ಲ. ಆದರೆ, ಸ್ವೀಕೃತಿ ನೀಡಿದ್ದಾರೆ.
ದೂರಿನಲ್ಲಿ ಏನಿದೆ ?
“ನಮ್ಮ ತಮ್ಮನಾದ ಬಸವರಾಜ ಈತನ ಹೆಂಡತಿಯಾದ ರೇಣುಕಮ್ಮ ಗಂ ಬಸವರಾಜ ಸಾಕೀನ್ ಅಂಕುಶದೊಡ್ಡಿ ಈಕೆಯನ್ನು ಹೆರಿಗೆಯ ಸಲುವಾಗಿ ದಿನಾಂಕ: 30/10/2024 ರಾತ್ರಿ 8 ಗಂಟೆ ಸುಮಾರಿಗೆ ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಂತರ ಆಸ್ಪತ್ರೆಯ ಮೂವರು ವೈದ್ಯರು, ಸಿಬ್ಬಂದಿಯವರು ವಿನಾಃಕಾರಣ ಹಣದ ಆಸೆಗಾಗಿ ಮತ್ತು ದುರುದ್ದೇಶದಿಂದ ಹೆರಿಗೆ ಮಾಡಲು ನಿರಾಕರಿಸಿದ್ದು, ಮತ್ತು ಹೊರಗಡೆ ಬೇರೆ ಆಸ್ಪತ್ರೆಗೆ ಹೋಗುವಂತೆ ಬಲವಂತ ಮಾಡಿದ್ದು ಇರುತ್ತದೆ. ನಂತರ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳಿಗೆ ಫೋನ್ ಮಾಡಿ ತಿಳಿಸಿದಾಗ ಇವರುಗಳು ಬೇಕಾಬಿಟ್ಟಿ ಸಿಜರಿನ್ ಮಾಡಿ ನಿರ್ಲಕ್ಷ್ಯವಹಿಸಿ, ನಂತರ ಸರಿಯಾಗಿ ಚಿಕಿತ್ಸೆ ಮಾಡದೇ ಇದ್ದು, ನಮಗೆ ಆರೋಗ್ಯವಾಗಿ ಇದ್ದಾಳೆ ಎಂದು ಬೇಜವಾಬ್ದಾರಿ ಮಾಡಿದ್ದು ಇರುತ್ತದೆ. ಇದರಿಂದ ತುಂಬಾ ರಕ್ತಸ್ರಾವವಾಗಿದ್ದರೂ ಸಹ ಇವರುಗಳು ಹಬ್ಬದ ನೆಪಮಾಡಿ ಸರಿಯಾಗಿ ಚಿಕಿತ್ಸೆ ಕೊಡದೇ ತುಂಬಾ ರಕ್ತಸ್ರಾವ ಆಗುವುದನ್ನು ಕಂಡು ನಂತರ ತಮ್ಮ ಮೇಲೆ ಅಪರಾದ ಬರಬಾರದು ಎಂದು ಜಿಲ್ಲಾ ಆಸ್ಪತ್ರೆ ರಾಯಚೂರಿಗೆ ರೆಫರ್ ಮಾಡಿ ಸಾವಿಗೆ ಕಾರಣರಾಗಿದ್ದಾರೆ” ಎಂದು ಪರುಶುರಾಮ ಮರಿಯಪ್ಪ ಅಂಕುಶದೊಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.
ಮೇಲಿಂದ ಮೇಲೆ ಅವಘಡ, ಹಲವರು ರಜೆಗೆ ಮೊರೆ ?
ತಾಲೂಕು ಸಾರ್ವಜನಿಕ ಆಸ್ಪತ್ರೆ ಮೇಲಿಂದ ಮೇಲೆ ಅವಘಡಗಳಿಗೆ ಸಾಕ್ಷಿಯಾಗುತ್ತಿದ್ದು, ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ಬೆಚ್ಚಿದ ಕೆಲ ವೈದ್ಯರು ಹಾಗೂ ಸಿಬ್ಬಂದಿ ರಜೆ ಮೊರೆ ಹೋಗಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ಪ್ರಸೂತಿ ತಜ್ಞ ವೈದ್ಯರು ಇಲ್ಲದೇ ಗರ್ಭಿಣಿಯರು ಹಾಗೂ ಬಾಣಂತಿಯರು ಸೂಕ್ತ ಚಿಕಿತ್ಸೆ ದೊರೆಯದೇ ಪರದಾಡುವಂತಾಗಿದೆ.
“ಮಗು ನೋಡೋ ಭಾಗ್ಯ ತಾಯಿಗಿಲ್ಲದಂಗಾತ್ರಿ”
“ಎಷ್ಟೋ ವರ್ಷ ಆದಮ್ಯಾಲೆ ನಮ್ಮ ತಮ್ಮನ ಹೆಣ್ತಿಗೆ ಮಗು ಆಗಿತ್ರಿ. ಮನೇರೆಲ್ಲ ಹಿರಿ ಹಿರಿ ಹಿಗ್ಗಿದ್ವಿ. ಆದ್ರ ಆ ಸಂತೋಷ ನೋಡೋ ಭಾಗ್ಯ ರೇಣುಕಮ್ಮಗ ಇಲ್ದಂಗಾತ್ರಿ. ಗೌರ್ನಮೆಂಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಬೇಕಂದ್ರ ದೊಡ್ಡ ದೊಡ್ಡೋರು ರೆಕಮೆಂಡು ಬೇಕನ್ನಂಗ ಆಗೇತ್ರಿ. ಡಿಎಚ್‌ಒ ಅವರಿಗೆ ಫೋನ್ ಮಾಡಿದ ನಂತ್ರ ಸರ್ಕಾರಿ ಆಸ್ಪತ್ರೆನಾಗ ಅಡ್ಮಿಟ್ ಮಾಡಿಕೆಂಡ್ರು, ಹಬ್ಬದ ನೆಪದಾಗ ಸರೀಗೆ ಟ್ರೀಟ್‌ಮೆಂಟ್ ಕೊಡ್ಲಿಲ್ಲ. ಹಿಂಗಾಗಿ ರೇಣುಕಮ್ಮ ಬಲಿಪಶು ಆದ್ಲು, ಈಗ ಮಗು ಉಳುದೈತಿ. ಅದಕ್ ದಿಕ್ಕು ಯಾರು ? ಅಂಬೋದೇ ತಿಳಿವಲ್ತು” ಎಂದು ಪರಶುರಾಮ ಅಂಕುಶದೊಡ್ಡಿ ನೋವಿನಿಂದ ಅಳಲು ತೋಡಿಕೊಂಡಿದ್ದಾರೆ.