ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 11
ತಾಲೂಕಿನ ಸುಕ್ಷೇತ್ರ ಸಿದ್ಧಪರ್ವತ ಅಂಬಾದೇವಿ ದೇವಸ್ಥಾನಕ್ಕೆ ರಾಯಚೂರು ಜಿಲ್ಲಾಧಿಕಾರಿ ನಿತೀಶ್.ಕೆ ಅವರು ಶುಕ್ರವಾರ ಭೇಟಿ ನೀಡಿದರು. ಅಂಬಾದೇವಿ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳು ಹಾಗೂ ದೇವಸ್ಥಾನ ಸಮಿತಿಯವರೊಂದಿಗೆ ದೇವಸ್ಥಾನದ ನೀಲನಕ್ಷೆ ವೀಕ್ಷಿಸಿ, ಪ್ರಸ್ತುತ ಹಂತದಲ್ಲಿರುವ ಕಾಮಗಾರಿ ಸೇರಿದಂತೆ ಹಲವು ವಿಷಯಗಳ ಕುರಿತು ಕೆಲವೊತ್ತು ಚರ್ಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅರುಣ್‌ಕುಮಾರ್ ದೇಸಾಯಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಿದರು. ಈ ವೇಳೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಸೇರಿ ಹಲವರು ಇದ್ದರು. ಕಳೆದ ಹಲವು ದಿನಗಳಿಂದ ದೇವಸ್ಥಾನ ಹೊಸ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.

ಅಂತಾರಾಜ್ಯ ಪ್ರಸಿದ್ಧ ಸುಕ್ಷೇತ್ರ
ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ನಂತರ ತಾಲೂಕಿನ ಸೋಮಲಾಪುರದ ಸುಕ್ಷೇತ್ರ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ದೇವಸ್ಥಾನ ಹೆಚ್ಚು ಖ್ಯಾತಿಯನ್ನು ಪಡೆದಿದೆ. 343ವರ್ಷಗಳ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಈ ದೇವಸ್ಥಾನಕ್ಕೆ, ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತಿ ವರ್ಷ ದಸರಾ ವೇಳೆ ಶರನ್ನವರಾತ್ರಿ ಉತ್ಸವ ಭಕ್ತಸಾಗರದ ಮಧ್ಯೆ ನಡೆದರೆ, ಬನದ ಹುಣ್ಣಿಮೆಯಂದು ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗುತ್ತದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ, ಮಂಗಳವಾರ, ಶುಕ್ರವಾರ ದೇವಿ ಸನ್ನಿಧಾನದಲ್ಲಿ ಸಾವಿರಾರು ಭಕ್ತರು ದರ್ಶನ ಪಡೆಯುತ್ತಾರೆ. ಈ ಭಾಗದಲ್ಲಿ ದೇವಸ್ಥಾನಕ್ಕೆ ಹೆಚ್ಚು ಮಹಿಳಾ ಭಕ್ತರು ನಡೆದುಕೊಳ್ಳುವುದು ವಾಡಿಕೆಯಾಗಿದೆ.
