ನಮ್ಮ ಸಿಂಧನೂರು, ಜುಲೈ 22
ನಗರದ ಗಾಂಧಿ ಸರ್ಕಲ್‌ನಲ್ಲಿ ಅಳವಡಿಸಿದ್ದ, ನೂತನ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಭಾವಚಿತ್ರದ ಕಟೌಟ್ ಏಕಾಏಕಿ ಬಿದ್ದು ಮೂವರು ಗಾಯಗೊಂಡು, ಕಾರೊಂದು ಜಖಂಗೊಂಡ ಘಟನೆ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರು ನಡೆದಿದೆ. ತಾಲೂಕಿನ ವೀರಾಪುರ ಗ್ರಾಮದ ಇಬ್ಬರು ಹಾಗೂ ಕರ್ನಾಟಕ ರೈತ ಸಂಘದ ಜಿಲ್ಲಾ ಮುಖಂಡ ಬೂದಿವಾಳಕ್ಯಾಂಪ್‌ನ ಚಿಟ್ಟಿಬಾಬು ಇವರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ವೀರಾಪುರ ಗ್ರಾಮದ ಮಹಿಳೆಯೊಬ್ಬರ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಗಾಂಧಿಸರ್ಕಲ್‌ನಲ್ಲಿ ಯಾವುದೇ ಸುರಕ್ಷತಾ ಸಾಧನಗಳನ್ನು ಅಳವಡಿಸದೇ ಕಟೌಟ್ ಅಳವಡಿಸಿದ್ದೇ ಏಕಾಏಕಿ ಬೀಳಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.