ಸಿಂಧನೂರು: ಸಿಂಧನೂರು ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷ, ಕುರಿ ಬಲಿ: ಜನರಲ್ಲಿ ಆತಂಕ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 09

ನಗರದ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿ ಭಾನುವಾರ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಜನರನ್ನು ದಂಗುಬಡಿಸಿದೆ. ಹಳ್ಳದ ಬಾಜು ಮೇಯಲುಬಿಟ್ಟಾಗ ಕುರಿಯೊಂದನ್ನು ಮೊಸಳೆ ತಿಂದುಹಾಕಿರುವುದು ಆತಂಕಕ್ಕೀಡುಮಾಡಿದೆ.
“ಭಾನುವಾರ ದಿವ್ಸ ಹಳ್ಳದ ದಂಡೀಗ ಕುರಿ ಮೆಯ್ಯಾಕ ಬಿಟ್ಟಿದ್ವಿ ರ‍್ರೀ. ಒಮ್ಮಿಂದೊಮ್ಮೆಲೆ ಸಪ್ಪಳಾತಿ ಏನಂತ ನೋಡದ್ರಗ ಮೊಸಳಿ ಕುರಿಗೆ ಬಾಯಿ ಹಾಕಿ ಎಳಕಂದುಬುಡ್ತಿ. ಇದ್ನ ನೋಡಿ ಕೈಕಾಲು ನಡಗಿ, ಅಲ್ಲಿಂದ ದಿಕ್ಕಪಾಲಾಗಿ ಓಡೋದ್ನೆ. ಆಮ್ಯಾಲೇ ಅಲ್ಲಿಂದ ಹೋಸು ಕುರಿ ಹೊಡಕಂದು ಹೋದ್ವಿ. ಭಾಳ ದಿನದಿಂದ ಇಲ್ಲಿ ಮೊಸಳಿ ಐತಿ ಅಂತದ್ರು, ನಂಬರ‍್ಲಿಲ್ಲ. ಶನಿವಾರ ದಿವ್ಸಾ ಕಣ್ಣಾರೆ ಕಂಡು ಹಳ್ಳದ ಸನ್ಯಾಕ ಹೋಗಬೇಕಂದ್ರ ಅಂಜಿಕಿ ಬರ್ತೈತಿ ನೋಡ್ರಿ” ಎಂದು ಕುರಿಗಾಹಿ ಬಸವರಾಜ ಸಿದ್ದಾಪುರ ‘ನಮ್ಮ ಸಿಂಧನೂರು ನ್ಯೂಸ್ ವೆಬ್’ಗೆ ಸೋಮವಾರ ತಿಳಿಸಿದ್ದಾರೆ.

Namma Sindhanuru Click For Breaking & Local News
ಸಿಂಧನೂರಿನ ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷವಾದ ಪ್ರದೇಶವನ್ನು ನಮ್ಮ ಕರ್ನಾಟಕ ಸೇನೆಯ ಮುಖಂಡರು ಹಾಗೂ ಬಸವರಾಜ ಸಿದ್ದಾಪುರ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತೋರಿಸಿದರು.

ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ
ಮೊಸಳೆ ಇರುವ ಬಗ್ಗೆ ನಮ್ಮ ಕರ್ನಾಟಕ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಅವರಿಗೆ ಬಸವರಾಜ ಸಿದ್ದಾಪುರ ಮತ್ತಿತರರು ಗಮನಕ್ಕೆ ತಂದಿದ್ದಾರೆ. ಆ ಕೂಡಲೇ ಸಂಘಟನೆಯವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿ, ಮೊಸಳೆ ಪ್ರತ್ಯಕ್ಷವಾದ ಹಳ್ಳದ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹಳ್ಳದ ಪ್ರದೇಶವನ್ನು ಸೋಮವಾರ ಮಧ್ಯಾಹ್ನ ಪರಿಶೀಲನೆ ನಡೆಸಿದರು. ಈ ವೇಳೆ ಮೊಸಳೆ ಪ್ರತ್ಯಕ್ಷವಾಗಲಿಲ್ಲ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಮೊಸಳೆಯನ್ನು ಪತ್ತೆಹಚ್ಚಲಾಗುವುದು ಎಂದು ಪ್ರತಿಕ್ರಿಯಿಸಿದರು.
ನಿವಾಸಿಗಳಲ್ಲಿ ಆತಂಕ
ಸುಕಾಲಪೇಟೆ ಏರಿಯಾದ ನಿವಾಸಿಗಳು ಸೇರಿದಂತೆ ಅಕ್ಕಪಕ್ಕದಲ್ಲಿ ಗದ್ದೆಗಳಿರುವ ರೈತರು ಹಳ್ಳದ ಕಡೆ ಹೋಗುವುದು ಸಾಮಾನ್ಯ. ದನಗಾಯಿಗಳು, ಕುರಿಗಾಹಿಗಳು ಸೇರಿದಂತೆ ಇಲ್ಲಿ ದಿನವೂ ಜಾನುವಾರುಗಳನ್ನು ಮೇಯಸಲು ಬರುತ್ತಾರೆ. ಶನಿವಾರ ಮೊಸಳೆ ಪ್ರತ್ಯಕ್ಷವಾಗಿರುವ ಕುರಿತು ವಿಷಯ ಗೊತ್ತಾಗುತ್ತಿದ್ದಂತೆ ರೈತರು ಹಾಗೂ ಸುಕಾಲಪೇಟೆ ಏರಿಯಾ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯ ಅವಘಡ ಸಂಭವಿಸುವ ಮುಂಚೆ ಎಚ್ಚೆತ್ತುಕೊಂಡು ಮೊಸಳೆಯನ್ನು ಹಿಡಿದು, ಬೇರೆಡೆ ಸಾಗಿಸಬೇಕು ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ, ರಾಜ್ಯ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಂಜುನಾಥ ಗುರುವಿನ್‌ಮಠ, ದುರುಗೇಶ ಕೋಣದ್‌, ವೀರೇಶ ಹಾಗೂ ಸುಕಾಲಪೇಟೆಯ ನಿವಾಸಿಗಳು ಇದ್ದರು.
ಕೂಡಲೇ ಕ್ರಮಕ್ಕೆ ನಮ್ಮ ಕರ್ನಾಟಕ ಸೇನೆ ಆಗ್ರಹ
ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯ ವಿಳಂಬ ಧೋರಣೆ ಅನುಸರಿಸದೇ, ಮೊಸಳೆಯನ್ನು ಪತ್ತೆಹಚ್ಚಿ ಇಲ್ಲಿಂದ ಬೇರೆಡೆಗೆ ಸಾಗಿಸಬೇಕು ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ, ರಾಜ್ಯ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಆಗ್ರಹಿಸಿದ್ದಾರೆ.

Namma Sindhanuru Click For Breaking & Local News



Spread the love

Leave a Reply

Your email address will not be published. Required fields are marked *