ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 21
ನಗರದ ಸುಕಾಲಪೇಟೆಯ ಪಕ್ಕದಲ್ಲಿರುವ ಹಳ್ಳದಲ್ಲಿ ಗುರುವಿನ ಮಠ ಸಮೀಪ ಅ.21-10-2024ರಂದು ಮಧ್ಯಾಹ್ನ ಮತ್ತೊಮ್ಮೆ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರು ಆತಂಕಿತರಾಗಿದ್ದಾರೆ. ಸೆಪ್ಟೆಂಬರ್ 9ರಂದು ಕುರಿಕಾಯಲು ಹೋಗಿದ್ದ ಕುರಿಗಾಯಿ ಬಸವರಾಜ ಸಿದ್ದಾಪುರ ಅವರಿಗೆ ಮೊದಲ ಬಾರಿಗೆ ಮೊಸಳೆ ಕಣ್ಣಿಗೆಬಿದ್ದಿತ್ತು. ಮೊಸಳೆ ನೋಡಿ ಬಸವರಾಜ ಸಿದ್ದಾಪುರ ಓಡಿ ಹೋಗಿದ್ದರು. ಆದರೆ ಕುರಿಯೊಂದು ಬಲಿಯಾಗಿತ್ತು.
ಈ ಕುರಿತು, ನಮ್ಮ ಕರ್ನಾಟಕ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಅವರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನ ಸೆಳೆದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಹಳ್ಳದ ಪ್ರದೇಶವನ್ನು ಮರುದಿನ ಮಧ್ಯಾಹ್ನ ಪರಿಶೀಲನೆ ನಡೆಸಿದರು. ಈ ವೇಳೆ ಮೊಸಳೆ ಪ್ರತ್ಯಕ್ಷವಾಗಿರಲಿಲ್ಲ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಮೊಸಳೆಯನ್ನು ಪತ್ತೆಹಚ್ಚಲಾಗುವುದು ಎಂದು ಪ್ರತಿಕ್ರಿಯಿಸಿದ್ದರು. ಪುನಃ ಸೆಪ್ಟೆಂಬರ್ 11ರಂದು ಮೊಸಳೆ ಪ್ರತ್ಯಕ್ಷವಾಗಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾನರ್ ಅಳವಡಿಕೆ
ನಮ್ಮ ಕರ್ನಾಟಕ ಸೇನೆಯ ತಾಲೂಕು ಘಟಕದ ಮುಖಂಡರು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅಲ್ಲದೇ ತಾಲೂಕಾ ಅರಣ್ಯಾಧಿಕಾರಿ ಅರುಣಾ ಅವರ ಮೂಲಕ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ರವಾನಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಮೊಸಳೆ ಪ್ರತ್ಯಕ್ಷವಾದ ಪ್ರದೇಶದಲ್ಲಿ “ಈ ಹಳ್ಳದಲ್ಲಿ ಮೊಸಳೆಗಳು ಇವೆ. ಯಾರೂ ಹಳ್ಳದಲ್ಲಿ ಇಳಿಯಬಾರದು” ಎಂಬ ಸಂದೇಶದ ಬ್ಯಾನರ್‌ವೊಂದನ್ನು ಅಳವಡಿಸಲಾಗಿತ್ತು.
ಅರಣ್ಯ ಇಲಾಖೆ ನಿರ್ಲಕ್ಷ್ಯ ಆರೋಪ
“ಸುಕಾಲಪೇಟೆ ಏರಿಯಾದ ನಿವಾಸಿಗಳು ಸೇರಿದಂತೆ ಅಕ್ಕಪಕ್ಕದಲ್ಲಿ ಗದ್ದೆಗಳಿರುವ ರೈತರು ಹಳ್ಳದ ಕಡೆ ಹೋಗುವುದು ಸಾಮಾನ್ಯ. ದನಗಾಯಿಗಳು, ಕುರಿಗಾಹಿಗಳು ಸೇರಿದಂತೆ ಇಲ್ಲಿ ದಿನವೂ ಜಾನುವಾರುಗಳನ್ನು ಮೇಯಸಲು ಬರುತ್ತಾರೆ. ಪದೇ ಪದೆ ಮೊಸಳೆ ಪ್ರತ್ಯಕ್ಷವಾಗುತ್ತಿರುವುದರಿಂದ ಆತಂಕ ಕಾಡುತ್ತಿದೆ. ಗುರುವಿನಮಠ ಹಿಂಭಾಗದ ಹಳ್ಳದ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯ ಅವಘಡ ಸಂಭವಿಸುವ ಮುಂಚೆ ಎಚ್ಚೆತ್ತುಕೊಂಡು ಮೊಸಳೆಯನ್ನು ಹಿಡಿದು, ಬೇರೆಡೆ ಸಾಗಿಸಬೇಕು ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ, ರಾಜ್ಯ ಕಾರ್ಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.