(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 18
ವ್ಯಕ್ತಿ ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರ ತಯಾರಿಸಿ, ಆತನ ಪಾಲಿನ ಆಸ್ತಿ ನುಂಗಲು ಕಳ್ಳದಾರಿ ಹುಡುಕಿದ ಪ್ರಕರಣವೊಂದು ಬಯಲಾಗಿದ್ದು, ಈ ಕುರಿತು ದಿನಾಂಕ: 17-05-2024ರಂದು ರಾಯಚೂರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ. ದೂರು ಸಲ್ಲಿಕೆಯಾಗುತ್ತಿದ್ದಂತೆ ನಕಲಿ ದಾಖಲೆ ಸೃಷ್ಟಿಸಿದವರು ಹಾಗೂ ಇದಕ್ಕೆ ಸಹಕರಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಏನಿದು ಪ್ರಕರಣ ?
ಪಾಮಯ್ಯ ನಂದಳ್ಳಿ ಸಿಂಧನೂರು ತಾಲೂಕಿನ ತುರ್ವಿಹಾಳ ಹೋಬಳಿ ವ್ಯಾಪ್ತಿಯ ಕಲ್ಮಂಗಿ ಗ್ರಾಮದ ನಿವಾಸಿಯಾಗಿದ್ದಾನೆ. ಈತನ ಹೆಸರಿನಲ್ಲಿ ಕಲ್ಮಂಗಿ ಸೀಮಾ ಸರ್ವೆ ನಂ.318/1ರಲ್ಲಿ 2 ಎಕರೆ 6 ಗುಂಟೆ ಹಾಗೂ ಸರ್ವೆ ನಂ.318/2ರಲ್ಲಿ 2 ಎಕರೆ 6 ಗುಂಟೆ ಒಟ್ಟು 4 ಎಕರೆ 12 ಗುಂಟೆ ಜಮೀನು ಇದೆ. ಇದು ಪಾಮಯ್ಯ ನಂದಳ್ಳಿ ಅವರ ಪಿತ್ರಾರ್ಜಿತ ಆಸ್ತಿಯಾಗಿದ್ದು, ನೇರ ವಾರಸುದಾರ ಇವರೇ ಆಗಿದ್ದಾರೆ. ಈ ಜಮೀನಿನ ಮೇಲೆ ಪಾಮಯ್ಯ ಬ್ಯಾಂಕ್‌ನಲ್ಲಿ ಬೆಳೆ ಸಾಲವನ್ನೂ ಪಡೆದುಕೊಂಡಿದ್ದಾನೆ.
ಖೊಟ್ಟಿ ಅರ್ಜಿದಾರರ ಸೃಷ್ಟಿ !
ಪಾಮಯ್ಯ ನಂದಳ್ಳಿ ತಂದೆ ಹನುಮಂತ ಜೀವಂತವಿದ್ದರೂ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿಯ ನಿವಾಸಿ ಪಾಮಯ್ಯ ಎಂಬ ಹೆಸರಿನ ಮರಣ ಪ್ರಮಾಣಪತ್ರ ತಂದು, ಸುಳ್ಳು ವಂಶಾವಳಿಯನ್ನು ಸೃಷ್ಟಿಸಿ, ಸರ್ವೆ ನಂ.318/1 ಜಮೀನಿಗೆ ಹನುಮನಗೌಡ ತಂದೆ ರಾಮನಗೌಡ, ಸರ್ವೆ ನಂ.318/2 ಜಮೀನಿಗೆ ದುರುಗಮ್ಮ ಗಂಡ ರಾಜುಗೌಡ ಅವರನ್ನು ಸುಳ್ಳು ಅರ್ಜಿದಾರರನ್ನಾಗಿ ಮಾಡಿ ಪೋತಿ ವೀರಾಸತ್ ಆಧಾರದ ಮೇಲೆ ಜಮೀನು ವರ್ಗಾವಣೆ ಮಾಡಲು ಕಲ್ಮಂಗಿ ಗ್ರಾಮ ಲೆಕ್ಕಾಧಿಕಾರಿ (ವಿಎ) ಸಹಕರಿಸಿದ್ದಾರೆಂದು ಆರೋಪಿಸಿ ಕರ್ನಾಟಕ ರೈತ ಸಂಘ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.
ಪಾಮಯ್ಯ ನಂದಳ್ಳಿಯಿಂದ ಜಿಲ್ಲಾಧಿಕಾರಿಗೆ ದೂರು
ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯವರು ನನ್ನ ಆಸ್ತಿಯನ್ನು ಬೇರೆಯವರಿಗೆ ಪೋತಿ ವೀರಾಸತ್ ಆಧಾರದ ಮೇಲೆ ಸುಳ್ಳು ಅರ್ಜಿದಾರರನ್ನು ಸೃಷ್ಟಿಸಿ ನನ್ನ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿ ಸುಳ್ಳು ಅರ್ಜಿದಾರರಿಗೆ ಸಹಕಾರಿಸಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ಕೈಗೊಂಡು ಬದುಕಿದ್ದಾಗಲೇ ನನ್ನ ಕುರಿತು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಇವರ ಮೇಲೆ ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದಿನಾಂಕ: 16-05-2024ರಂದು ದೂರು ಸಲ್ಲಿಸಿದ್ದಾರೆ.
ರೈತನ ನೆರವಿಗೆ ಧಾವಿಸಿದ ಕೆಆರ್‌ಎಸ್
ಪರಿಶಿಷ್ಟ ಪಂಗಡ ಸಮುದಾಯದ ಮುಗ್ದ ಸ್ವಭಾವದ ರೈತನನ್ನು ಯಾಮಾರಿಸಿ ಆತನ ಆಸ್ತಿಯನ್ನು ಕಬಳಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ತಾಲೂಕು ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಹಾಗೂ ಟಿಯುಸಿಐ ಜಿಲ್ಲಾ ಅಧ್ಯಕ್ಷ ಬಿ.ಎನ್.ಯರದಿಹಾಳ, ರೈತ ಮುಖಂಡ ಮೇಘರಾಜ್ ನಾಯಕ ಅವರು ನೆರವಿಗೆ ಧಾವಿಸುವ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.