ಸಿಂಧನೂರು: ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಲು ಆಗ್ರಹಿಸಿ ಸಿಪಿಐ(ಎಂಎಲ್) ಪ್ರತಿಭಟನೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 23

ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಅಪಹರಣ, ಅತ್ಯಾಚಾರ, ಕೊಲೆ ಪ್ರಕಾರಣಗಳ ಪ್ರಮುಖ ಅಪರಾಧಿಗಳನ್ನು ಕೂಡಲೇ ಬಂಧಿಸಿ, ತನಿಖೆಯನ್ನು ಉನ್ನತಮಟ್ಟದ ನ್ಯಾಯಾಂಗಕ್ಕೆ ವಹಿಸುವಂತೆ ಆಗ್ರಹಿಸಿ ಸಿಪಿಐ(ಎಂಎಲ್) ರೆಡ್‌ಸ್ಟಾರ್ ವತಿಯಿಂದ ನಗರದ ತಹಸಿಲ್ ಕಾರ್ಯಾಲಯದ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಗ್ರೇಡ್ ತಹಸೀಲ್ದಾರ್ ಚಂದ್ರಶೇಖರ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಅವರು “ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಸುತ್ತಮುತ್ತ ನಡೆದಿವೆ ಎನ್ನಲಾದ, ಸರಣಿ ಸಾವುಗಳ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ನೀಡಲಾಗಿದ್ದು, ಈ ತಂಡದ ಮೇಲೆ ರಾಜಕೀಯ ಪ್ರಭಾವದಿಂದ ಸತ್ಯಾಂಶ ಹೊರಬರುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಈ ಪ್ರಕರಣವನ್ನು ಉನ್ನತಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕು. ಅಲ್ಲದೇ, ವಿದ್ಯಾರ್ಥಿನಿ ಸೌಜನ್ಯಳ ಹತ್ಯೆ ಪ್ರಕರಣದ ತನಿಖೆಯನ್ನು ಮುಚ್ಚಿ ಹಾಕಿ, ಕರ್ತವ್ಯಕ್ಕೆ ದ್ರೋಹಬಗೆದು, ಅಪರಾಧಿಗಳ ಪರ ನಿಂತಿರುವ ಎಲ್ಲಾ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು. ಜೊತೆಗೆ ಈ ಪ್ರಕರಣದ ಪ್ರಮುಖ ಆರೋಪಿಗಳು ಯಾರೆಂದು ಸರ್ಕಾರಕ್ಕೆ ಗೊತ್ತಿದ್ದು, ಅಪರಾಧಿಗಳನ್ನು ಕೂಡಲೇ ಬಂಧಿಸುವುದರ ಮೂಲಕ ಇಡೀ ಪ್ರಕರಣವನ್ನು ಉನ್ನತ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಹಾಗೆಯೇ ಧರ್ಮಸ್ಥಳದ ಸುತ್ತಮುತ್ತಲಿನ ಸ್ಥಳಗಳಲ್ಲಿ ಹೂತಿಟ್ಟಿರುವ ಅಸಂಖ್ಯಾತ ಮೃತದೇಹಗಳನ್ನು ಹೊರ ತೆಗೆದು ಉನ್ನತಮಟ್ಟದ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟು ಸತ್ಯವನ್ನು ಬಯಲಿಗೆಳೆಯಬೇಕು”ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಚ್.ಆರ್.ಹೊಸಮನಿ, ಕೆಆರ್‌ಎಸ್ ತಾಲೂಕು ಉಪಾಧ್ಯಕ್ಷ ಹನುಮಂತಪ್ಪ ಗೋಡಿಹಾಳ, ಪಕ್ಷದ ರುಕ್ಮಿಣಿ ದೋಭಿಗಲ್ಲಿ, ಹುಲುಗಪ್ಪ ಬಳ್ಳಾರಿ, ಮುದಿಯಪ್ಪ ಹನುಮನಗರ ಕ್ಯಾಂಪ್, ಸಂಗಪ್ಪ, ರಂಗಪ್ಪ, ಗೌಸ್‌ಖಾನ್ ಕಲಮಂಗಿ ಸೇರಿದಂತೆ ಇನ್ನಿತರರಿದ್ದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *