ಸಿಂಧನೂರು: ರೈತರ ಮೇಲೆ ಹಲ್ಲೆ ಮಾಡಿದ ಎಂಎಸ್‌ಪಿಎಲ್ ಗೂಂಡಾಗಳನ್ನು ಬಂಧಿಸಿ, ಕಂಪನಿ ಪರವಾನಗಿ ರದ್ದುಗೊಳಿಸಲು ಸಿಪಿಐ(ಎಂಎಲ್) ಮಾಸ್‌ಲೈನ್ ಆಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 26

ಕೊಪ್ಪಳ ನಗರದ ಹತ್ತಿರದ ಬಸಾಪುರ ಕೆರೆಯಲ್ಲಿ ದನ ಮತ್ತು ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ, ರೈತರ ಮೇಲೆ ಎಂಎಸ್‌ಪಿಎಲ್ ಬಲ್ಡೋಟಾ ಕಂಪನಿಯ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ, ಕೂಡಲೇ ಕಂಪನಿಯ ಗೂಂಡಾಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಹಾಗೂ ಕಂಪನಿ ಪರವಾನಗಿ ರದ್ದುಗೊಳಿಸುವಂತೆ ಆಗ್ರಹಿಸಿ, ಸಿಪಿಐ(ಎಂಎಲ್) ಮಾಸ್‌ಲೈನ್ ಹಾಗೂ ಕರ್ನಾಟಕ ರೈತ ಸಂಘದಿಂದ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಪತ್ರ ರವಾನಿಸಲಾಯಿತು.
ಬಸಾಪುರ ಕೆರೆ ಸಾರ್ವಜನಿಕರದ್ದು, ಕಂಪನಿಯ ಸ್ವತ್ತಲ್ಲ: ಬಿ.ಎನ್‌.ಯರದಿಹಾಳ
ಈ ಸಂದರ್ಭದಲ್ಲಿ ಮಾಸ್‌ಲೈನ್ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಯರದಿಹಾಳ ಮಾತನಾಡಿ, “ಕೊಪ್ಪಳ ನಗರದಿಂದ 3 ಕಿ.ಮೀ ಅಂತರದಲ್ಲಿರುವ ಬಸಾಪುರ ಕೆರೆಯನ್ನು ಜನ, ಜಾನುವಾರುಗಳಿಗೆ ಮುಕ್ತಗೊಳಿಸಬೇಕೆಂದು ಹೈಕೋರ್ಟ್ ಆದೇಶ ಮಾಡಿದೆ. ಆದರೆ ಎಂಎಸ್‌ಪಿಎಲ್ ಬಲ್ಡೋಟಾ ಕಂಪನಿಯವರು ಕೆರೆ ಸುತ್ತಲೂ ಕೋಟೆ ಆಕಾರದ ಎತ್ತರದ ಗೋಡೆ ಕೊಟ್ಟಿದ್ದಾರೆ. ಈ ಕಾರಣದಿಂದ ಸುತ್ತಲೂ ಹಳ್ಳಿಗಳ ಕುರಿ, ಜಾನುವಾರುಗಳಿಗೆ ನೀರು ಕುಡಿಯಲು ಅವಕಾಶ ಇಲ್ಲದಂತಾಗಿದೆ. ಕಂಪನಿಯ ಈ ಕಾನೂನು ವಿರೋಧಿ ಕಾರ್ಯವನ್ನು ತಡೆಗಟ್ಟಲು ಒತ್ತಾಯಿಸಿ, ಈಗಾಗಲೇ ಎರಡು ಹೋರಾಟ ನಡೆಸಲಾಗಿದೆ. ಜುಲೈ 25ರಂದು ಬಸಾಪುರ, ಹಾಲವರ್ತಿ ಇತರೆ ಗ್ರಾಮಗಳ ರೈತರು ತಮ್ಮ ಕುರಿ, ಹಾಗೂ ದನಕರುಗಳಿಗೆ ನೀರು ಕುಡಿಸಲು ಕೆರೆ ಹತ್ತಿರ ಹೋಗಿದ್ದಾರೆ. ಕೆರೆಗೆ ಹೋಗುವುದನ್ನು ತಡೆದು ನಿಲ್ಲಿಸಿದ ಕಂಪನಿಯ ಗೂಂಡಾಗಳು ಕುರಿಗಾಹಿ ಮತ್ತು ದನಗಾಹಿ ರೈತರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಮುಖ್ಯವಾಗಿ ದೇವಪ್ಪ ಹಾಲಳ್ಳಿ ಹಾಗೂ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಇದು ಖಂಡನಾರ್ಹ” ಎಂದರು.

Namma Sindhanuru Click For Breaking & Local News

ಕೊಪ್ಪಳ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಲಿ: ರಮೇಶ ಪಾಟೀಲ್‌ ಬೇರಿಗಿ
ಕೆಆರ್‌ಎಸ್ ತಾಲೂಕು ಅಧ್ಯಕ್ಷ ರಮೇಶ್ ಪಾಟೀಲ್ ಬೇರಿಗಿ ಮಾತನಾಡಿ, ಕಳೆದ ಎರಡು ದಿನಗಳಿಂದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರು, ಜಾನುವಾರುಗಳೊಂದಿಗೆ ಹೋರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಕುರಿ, ದನ-ಕರುಗಳನ್ನು ಕೆರೆಯ ನೀರು ಕುಡಿಸಲು ಹೋದ ಸಂದರ್ಭದಲ್ಲಿ ಕಂಪನಿಯವರು ಬಡಿಗೆಗಳನ್ನು ಹಿಡಿದುಕೊಂಡು ರೈತರ ಮೇಲೆ ಮಾರಣಾಂತಿಕವಾಗಿ ದೌರ್ಜನ್ಯ ನಡೆಸಿರುತ್ತಾರೆ. 43 ಎಕರೆ ಕೆರೆಯ ಪೈಕಿ, 15 ಎಕರೆಯಷ್ಟು ಕೆರೆಯನ್ನು ಮುಚ್ಚಿ, ರಸ್ತೆ ಮಾಡಿಕೊಂಡಿರುವ ಕಂಪನಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕಳೆದ ಎರಡು ವರ್ಷಗಳಿಂದ ಬಸಾಪುರ, ಹಾಲವರ್ತಿ ಇತರೆ ಗ್ರಾಮಗಳ ರೈತರು, ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟು ವಿನಂತಿಸಿದ್ದರೂ ಪ್ರಯೋಜನವಾಗಿಲ್ಲ” ಎಂದು ಆಪಾದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಯಲ್ಲಪ್ಪ ಚಿಕ್ಕಭೇರಿಗಿ, ಶ್ಯಾಮಿದ್‌ಸಾಬ್, ಮಹ್ಮದ್ ಯಾಸಿನ್, ದುರ್ಗಾಪ್ರಸಾದ್ ಇನ್ನಿತರರಿದ್ದರು.
ಹಕ್ಕೊತ್ತಾಯಗಳು
ಕೊಪ್ಪಳ ನಗರ ಸುತ್ತಲೂ 20 ಹಳ್ಳಿಗಳ ಲಕ್ಷಾಂತರ ಜನರ ಆರೋಗ್ಯಕ್ಕೆ ಮಾರಕವಾಗಲಿರುವ, 54 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಉಕ್ಕಿನ ಕಾರ್ಖಾನೆಯ ಪರವಾನಗಿಯನ್ನು ರದ್ದುಗೊಳಿಸಬೇಕು ಹಾಗೂ ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಇತರೆ 10 ಜನ ಪ್ರಮುಖರು ಮತ್ತು ರೈತರ ಮೇಲೆ ಹಾಕಿರುವ ಸುಳ್ಳು ಪೋಲೀಸ್ ಕೇಸ್ ವಾಪಸ್ ಪಡೆಯಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಗಳ ಮನವಿಪತ್ರವನ್ನು ಸಿಎಂ ಅವರಿಗೆ ರವಾನಿಸಲಾಯಿತು.


Spread the love

Leave a Reply

Your email address will not be published. Required fields are marked *