ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 19
ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಗೃಹಮಂತ್ರಿ ಅಮಿತ್ ಶಾ ಅವರು ರಾಜ್ಯಸಭೆ ಕಲಾಪದಲ್ಲಿ ನೀಡಿದ ಹೇಳಿಕೆ ಖಂಡಿಸಿ ಸಿಪಿಐ(ಎಂಎಲ್) ಲಿಬರೇಶನ್ ಪಾರ್ಟಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟçಪತಿಗಳಿಗೆ ಗುರುವಾರ ಮನವಿ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಪಾರ್ಟಿಯ ರಾಜ್ಯ ಸಮಿತಿ ಸದಸ್ಯ ನಾಗರಾಜ್ ಪೂಜಾರ್ ಮಾತನಾಡಿ, “ಅಂಬೇಡ್ಕರ್ ಹೆಸರು ಹೇಳುವುದು ಈಗ ಶೋಕಿ ಆಗಿಬಿಟ್ಟಿದೆ, ಇಷ್ಟೊಂದು ಬಾರಿ ದೇವರು ಹೆಸರು ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿ ಆಗುತ್ತಿತ್ತು” ಎಂದು ರಾಜ್ಯಸಭೆ ಕಲಾಪದಲ್ಲಿ ನಾಲಿಗೆ ಹರಿಬಿಟ್ಟು ಬಾಬಾ ಸಾಹೇಬರಿಗೆ ಅವಮಾನ ಮಾಡುವ ಮೂಲಕ ರಾಷ್ಟçದ್ರೋಹ ಕೃತ್ಯ ಎಸಗಿದ್ದಾರೆ. ಸಂವಿಧಾನದತ್ತವಾದ ಕೇಂದ್ರದ ಗೃಹಸಚಿವ ಸ್ಥಾನದಲ್ಲಿದ್ದುಕೊಂಡು ಸಂವಿಧಾನ ನಿರ್ಮಾತೃ ಅಂಬೇಡ್ಕರ್ ಅವರ ಬಗ್ಗೆಯೇ ಹೀನಾಯವಾಗಿ ಹೇಳಿಕೆ ನೀಡಿರುವುದು ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಇರುವ ಸಿಟ್ಟನ್ನು ಹೊರಹಾಕಿದಂತಾಗಿದೆ. ಆರ್‌ಎಸ್‌ಎಸ್‌ನ ಕೂಸಾದ ಬಿಜೆಪಿಯು ದೇಶದ ಜನರ ಮೇಲೆ ಮನುವಾದ ಹೇರಲು ಹೊರಟಿದೆ. ಅದರ ಭಾಗವಾಗಿ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಈ ಹೇಳಿಕೆ ಖಂಡನಾರ್ಹವಾಗಿದ್ದು, ಈ ಕೂಡಲೇ ಗೃಹ ಸಚಿವ ಅಮಿತ್ ಶಾ ಬೇಷರತ್ ಕ್ಷಮೆಯಾಚಿಸಿ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.
ದೇಶಕ್ಕೆ ಸಂವಿಧಾನ ಕೊಟ್ಟಂತ, ಎಲ್ಲ ಜಾತಿ, ಜನಾಂಗದವರಿಗೆ ಆದರ್ಶರಾದ ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಹೀಯಾಳಿಸಿರುವುದು ಅತ್ಯಂತ ಖಂಡನಾರ್ಹ. ಅಂಬೇಡ್ಕರ್ ಅವರನ್ನು ಅವಮಾನಿಸುವುದು ರಾಷ್ಟçದ್ರೋಹದ ಕೆಲಸವಾಗಿದೆ. ಹಾಗಾಗಿ ರಾಷ್ಟçದ್ರೋಹದ ಅಡಿಯಲ್ಲಿ ಅಮಿತ್ ಶಾ ಅವರ ವಿರುದ್ಧ ಕೇಸ್ ದಾಖಲಿಸಬೇಕು. ಅಮಿತ್ ಶಾ ಹೇಳಿಕೆ ಖಂಡಿಸಿ ದೇಶದ ಮೂಲೆ ಮೂಲೆಯಲ್ಲಿ ಹೋರಾಟ ನಡೆಯುತ್ತಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಲಾಗುತ್ತಿದೆ. ಬಾಬಾ ಸಾಹೇಬರು ಕೊಟ್ಟ ಸಂವಿಧಾನದ ಅಡಿಯಲ್ಲಿ ಸಚಿವ ಸ್ಥಾನ ಪಡೆದಿರುವ ಅಮಿತ್ ಶಾ ಅವರು, ಸಂವಿಧಾನ ಅಡಿಯಲ್ಲಿ ಕೆಲಸ ನಿರ್ವಹಿಸದೇ ಮನುವಾದ, ಆರ್‌ಎಸ್‌ಎಸ್ ಸಿದ್ಧಾಂತವನ್ನಿಟ್ಟುಕೊAಡು ಆಡಳಿತ ನಡೆಸುತ್ತಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಪ್ಯಾಸಿಸ್ಟ್ ಸರ್ಕಾರ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳಿಗೆ ಮಣೆ ಹಾಕಿ ಆಡಳಿತ ನಡೆಸುತ್ತಿದೆ. ದೇಶದ ರೈತರು, ಕಾರ್ಮಿಕರು ಹಾಗೂ ದುಡಿಯುವ ವರ್ಗವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ದೇಶದ ಪ್ರಧಾನಿಯವರು ಅಮಿತ್ ಶಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಟುವಾಗಿ ಟೀಕಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರ ಬಸವರಾಜ ಎಕ್ಕಿ ಮಾತನಾಡಿ, ಅಂಬೇಡ್ಕರ್ ಹೆಸರು ಹೇಳುವುದು ಶೋಕಿಯಾಗಿದ್ದು, ಇಷ್ಟೊಂದು ಬಾರಿ ದೇವರ ಹೆಸರು ಹೇಳಿದ್ದರೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಬಾಬಾ ಸಾಹೇಬರನ್ನು ಕೀಳಾಗಿ ಬಿಂಬಿಸಿ ಮಾತನಾಡಿರುವುದು ಖಂಡನಾರ್ಹ. ಹಾಗಾದರೆ ಅಮಿತ್ ಶಾ ಅವರು ಸಂವಿಧಾನದ ಅಡಿಯಲ್ಲಿ ಗೃಹ ಸಚಿವರಾಗಿ ಅಧಿಕಾರ ಪಡೆದಿದ್ದು ಯಾಕೆ ? ಯಾವುದೋ ದೇವಸ್ಥಾನದಲ್ಲಿದ್ದುಕೊಂಡು ತಾವೇ ದೇವರ ಹೆಸರು ಜಪ ಮಾಡುತ್ತಾ ಸ್ವರ್ಗವನ್ನು ಪಡೆಯಬಹುದಿತ್ತಲ್ಲ. ತಲೆಯಲ್ಲಿ ಸಂಪೂರ್ಣ ಮನುವಾದವನ್ನು ತುಂಬಿಕೊAಡಿರುವ ಬಿಜೆಪಿ ಮತ್ತು ಅದರ ಮಂತ್ರಿಗಳು ಹಾಗೂ ರಾಜಕಾರಣಿಗಳು ಪುನಃ ದೇಶದ ಜನರ ಮೇಲೆ ಮನುಸಂಸ್ಕೃತಿಯನ್ನು ಹೇರಲು ಹೊರಟಿದ್ದಾರೆ. ದೇಶದ ಸರ್ವ ಜನರ ವಿಮೋಚನೆಗಾಗಿ ಹತ್ತಾರು ಡಿಗ್ರಿಗಳನ್ನು ಪಡೆದು, ಬಹಳಷ್ಟು ದೇಶಗಳಲ್ಲಿ ಸಂಚರಿಸಿ, ಆಳ ಅಧ್ಯಯನದೊಂದಿಗೆ ಸಂವಿಧಾನ ನೀಡಿದ ನಿರ್ಮಾತೃವನ್ನೇ ಹೀಗಳೆಯುವ ಗೃಹ ಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಎಕ್ಕಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಕೊಂಡೆ, ಬಸವರಾಜ ಬೆಳಗುರ್ಕಿ, ಶ್ರೀನಿವಾಸ ಬುಕ್ಕನಹಟ್ಟಿ, ರಾಘವೇಂದ್ರ ಉಪ್ಪಳ, ಹುಲುಗಪ್ಪ ಹುಲುಗುಂಚಿ, ಶೇಕ್ಷಾವಲಿ, ಮಂಜುನಾಥ, ಹನುಮಂತ ಬೂದಿವಾಳಕ್ಯಾಂಪ್, ಕಂಠೆಪ್ಪ ರೈತನಗರಕ್ಯಾಂಪ್, ಮಲ್ಲಿಕಾರ್ಜುನ ರೈತನಗರ ಸೇರಿದಂತೆ ಇನ್ನಿತರರು ಇದ್ದರು.