ಸಿಂಧನೂರು: ತಾಲೂಕು ಸಾರ್ವಜನಿಕ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಿ, ಸಮಗ್ರವಾಗಿ ಸುಧಾರಿಸಲು ಸಿಪಿಐ(ಎಂಎಲ್) ಲಿಬರೇಶನ್ ಆಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 15

ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಮಗ್ರವಾಗಿ ಸುಧಾರಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಸೌಲಭ್ಯ ಒದಗಿಸಬೇಕು ಹಾಗೂ ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್ ವತಿಯಿಂದ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಸುರೇಶಗೌಡ ಅವರ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೋಮವಾರ ಮನವಿ ರವಾನಿಸಲಾಯಿತು.
ಬಡ ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವಲ್ಲಿ ವಿಫಲ: ನಾಗರಾಜ ಪೂಜಾರ್‌ ಆರೋಪ
ಸಿಪಿಐ(ಎಂಎಲ್) ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ಮಾತನಾಡಿ, ಸಿಂಧನೂರು ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಚಿಕಿತ್ಸೆ ಪಡೆಯಲು ರೋಗಿಗಳು ವೈದ್ಯರಿಗಾಗಿ ದಿನವೂ ಗಂಟೆಗಟ್ಟಲೇ ಕಾಯುವಂತಾಗಿರುತ್ತದೆ. ಔಷಧಿಗಳ ಕೊರತೆ, ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ನಡುವಿನ ಹೊಂದಾಣಿಕೆ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಕುರಿತು ಮೇಲಿಂದ ಮೇಲೆ ನಾಗರಿಕರಿಂದ ವ್ಯಾಪಕ ಆರೋಪಗಳು ಕೇಳಿಬಂದಿವೆ. ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯೂ ಬಡಜನರಿಗೆ ಚಿಕಿತ್ಸೆ ಸೌಲಭ್ಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೆಸರಿಗೆ ಮಾತ್ರ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಾಗಿದ್ದು, ಇಲ್ಲಿ ಚಿಕಿತ್ಸೆ ಅರಸಿ ಬರುವವರು ಒಂದಿಲ್ಲೊಂದು ಸಮಸ್ಯೆ, ಸವಾಲು ಎದುರಿಸುತ್ತಿದ್ದಾರೆ. ಬೆಳಿಗ್ಗೆ ಜನ ಜಂಗುಳಿಯ ನಡುವೆ ಚೀಟಿ ಕೌಂಟರ್‌ನ ಮುಂದೆ ನಿಂತು, ಚೀಟಿ ಪಡೆದು ವೈದ್ಯರ ಕೊಠಡಿಯತ್ತ ಹೋದರೆ ಮುಚ್ಚಿದ ಬಾಗಿಲು ಇಲ್ಲವೇ, ಬಾಗಿಲು ತೆರೆದಿದ್ದರೂ ವೈದ್ಯರ ಖಾಲಿಚೇರು ಕಂಡುಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Namma Sindhanuru Click For Breaking & Local News

ʼತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸೌಕರ್ಯ ಒದಗಿಸಿʼ : ಬಸವರಾಜ ಕೊಂಡೆ ಒತ್ತಾಯ
ಸಿಪಿಐ(ಎಂಎಲ್‌) ಮುಖಂಡ ಬಸವರಾಜ ಕೊಂಡೆ ಮಾತನಾಡಿ, ನಗರದ ಪಿಡಬ್ಲ್ಯುಡಿ ಕ್ಯಾಂಪಿನಲ್ಲಿ ಇತ್ತೀಚಿಗೆ ತಾಯಿ ಮಕ್ಕಳ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಒದಗಿಸಲಾಗಿದೆ. ಆದರೆ ಹೊಸ ಆಸ್ಪತ್ರೆಯಲ್ಲಿ ಇನ್ನೂ ಹಲವು ಕೊರತೆಗಳಿದ್ದು, ಇದರಿಂದ ಮಹಿಳೆಯರು ಮತ್ತು ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ. 60 ಬೆಡ್‌ನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಇದುವರೆಗೂ ಪೂರ್ಣ ಪ್ರಮಾಣದ ವೈದ್ಯ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ, ಅಗತ್ಯ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದರಿಂದ ಮಹಿಳಾ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಸದಸ್ಯರಾದ ರಾಘವೇಂದ್ರ ಉಪ್ಪಳ, ಶ್ರೀನಿವಾಸ ಬುಕ್ಕನಟ್ಟಿ, ಮಹಾದೇವ ಅಮರಾಪುರ, ಕಂಠೆಪ್ಪ ರೈತನಗರ ಕ್ಯಾಂಪ್ ಸೇರಿದಂತೆ ಇನ್ನಿತರರು ಇದ್ದರು.
ಹಕ್ಕೊತ್ತಾಯಗಳು:- ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮಂಜೂರಾತಿ ಹುದ್ದೆಗಳನ್ನು ಸಂಪೂರ್ಣ ಭರ್ತಿ ಮಾಡಬೇಕು ಹಾಗೂ ಸಮಯಕ್ಕೆ ಸರಿಯಾಗಿ ವೈದ್ಯರು ಹಾಜರಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಬೇಕು, ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರತೆ ಇರುವ ಎಲ್ಲ ರೀತಿಯ ವೈದ್ಯಕೀಯ ಯಂತ್ರೋಪಕರಣಗಳು, ಸಾಮಗ್ರಿಗಳನ್ನು ಪಟ್ಟಿ ಮಾಡಿ, 1 ತಿಂಗಳ ಒಳಗಾಗಿ ಆಸ್ಪತ್ರೆಯಲ್ಲಿ ವ್ಯವಸ್ಥೆಗೊಳಿಸಬೇಕು, 60 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಂಜೂರಾತಿ ಹುದ್ದೆಗಳನ್ನು ಸಂಪೂರ್ಣ ಭರ್ತಿ ಮಾಡಬೇಕು ಹಾಗೂ ಸಮಯಕ್ಕೆ ಸರಿಯಾಗಿ ವೈದ್ಯರು ಹಾಜರಿದ್ದು ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಬೇಕು, ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರತೆ ಇರುವ ಎಲ್ಲ ರೀತಿಯ ವೈದ್ಯಕೀಯ ಯಂತ್ರೋಪಕರಣಗಳು, ಸಾಮಗ್ರಿಗಳನ್ನು ಪಟ್ಟಿ ಮಾಡಿ, 1 ತಿಂಗಳ ಒಳಗಾಗಿ ಈ ಆಸ್ಪತ್ರೆಯಲ್ಲಿ ವ್ಯವಸ್ಥೆಗೊಳಿಸಬೇಕು, ಸಮಯ ಪಾಲನೆ ಮಾಡದ ವೈದ್ಯರ ಮೇಲೆ ಶಿಸ್ತುಕ್ರಮ ಜರುಗಿಸಬೇಕು, ದಕ್ಷತೆ, ಸೇವಾಪರತೆಯಿಂದ ಕೆಲಸ ಮಾಡುವ ವೈದ್ಯರನ್ನು ನೇಮಕ ಮಾಡಬೇಕು, ರಾತ್ರಿ ವೇಳೆ ಗರ್ಭಿಣಿಯರು, ಬಾಣಂತಿಯರು ಹಾಗೂ ತುರ್ತು ಚಿಕಿತ್ಸೆಗೆ ಬಂದ ರೋಗಿಗಳನ್ನು ದಾಖಲಿಸಿಕೊಳ್ಳುವಲ್ಲಿ ನಿರ್ಲಕ್ಷö್ಯ ತೋರುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು, ಕರ್ತವ್ಯ ವೇಳೆಯಲ್ಲಿ ಆಸ್ಪತ್ರೆಯ ಕೆಲ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅಂತವರನ್ನು ಪತ್ತೆಹಚ್ಚಿ ಶಿಸ್ತುಕ್ರಮ ಜರುಗಿಸಬೇಕು, ಹೆರಿಗೆ ಮತ್ತು ಇನ್ನಿತರ ವಿಭಾಗಗಳಲ್ಲಿ ಸಿಬ್ಬಂದಿಯನ್ನು ರೋಟೀನ್ ಪ್ರಕಾರ ಬದಲಾವಣೆ ಮಾಡುವ ಮೂಲಕ ವರ್ಕ್ಲೋಡ್ ನಿಭಾಯಿಸಲು ಕೂಡಲೇ ಸೂಚನೆ ನೀಡಬೇಕು, ದಿನನಿತ್ಯ ಕರ್ತವ್ಯದಲ್ಲಿರುವ ವೈದ್ಯರ ಹೆಸರು, ಮೊಬೈಲ್ ನಂಬರ್ ಹಾಗೂ ಸಮಯದ ವಿವರವನ್ನು ಸೂಚನಾ ಫಲಕದಲ್ಲಿ ನಮೂದಿಸಬೇಕು, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಲ್ಲಿ ಡ್ರೆಸ್‌ಕೋಡ್ ಇರುವುದಿಲ್ಲ, ಗುರುತಿನ ಚೀಟಿಯೂ ಕಾಣುವುದಿಲ್ಲ. ಇದರಿಂದ ರೋಗಿಗಳು ಮತ್ತು ರೋಗಿಗಳ ಕಡೆಯವರಿಗೆ ಯಾರು ಸಿಬ್ಬಂದಿ ಎಂಬುದು ಗುರುತಿಸಲು ಸಮಸ್ಯೆಯಾಗುತ್ತಿದ್ದು, ಕೂಡಲೇ ಸಮಸ್ಯೆ ಪರಿಹರಿಸಬೇಕು, ಇತ್ತೀಚೆಗೆ ವಿವಿಧ ಪರೀಕ್ಷೆಗಳಿಗೆ ಹೊರಗಡೆ ಚೀಟಿ ಬರೆಯಲಾಗುತ್ತಿದ್ದು, ಇದರಿಂದ ಬಡ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಕೊರತೆ ಇರುವ ಉಪಕರಣಗಳನ್ನು ಪಟ್ಟಿಮಾಡಿ ಕೂಡಲೇ ಅಂತಹ ಉಪಕರಣಗಳನ್ನು ತರಿಸಲು ಮೇಲಧಿಕಾರಿಗಳಿಗೆ ವರದಿ ನೀಡಬೇಕು, ಎರಡೂ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಬೇಕು.


Spread the love

Leave a Reply

Your email address will not be published. Required fields are marked *