ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 08
ನಗರದಲ್ಲಿ ದಸರಾ ಉತ್ಸವ ಸಮಿತಿಯಿಂದ ಎಪಿಎಂಸಿಯ ಗೇಟ್ 1ರ ಆವರಣದಲ್ಲಿ ದಿನಾಂಕ: 8-10-2024 ಮಂಗಳವಾರದAದು ಹಮ್ಮಿಕೊಂಡಿರುವ ರೈತ ದಸರಾ ಅದ್ಧೂರಿ ಚಾಲನೆಗೆ ಬೆಳಿಗ್ಗೆಯಿಂದಲೇ ಭರದ ಸಿದ್ಧತೆ ನಡೆಯುತ್ತಿರುವುದು ಕಂಡುಬಂತು. ರೈತರಿಗೆ ಕೃಷಿ ಉಪಕರಣಗಳ ಮಾಹಿತಿ ಒದಗಿಸುವ ಉದ್ದೇಶದಿಂದ ಸ್ಟಾಲ್‌ಗಳನ್ನು ಹಾಕಿರುವ ವಿವಿಧ ಆಗ್ರೋ ಎಂಜಿನಿಯರಿಂಗ್ ಕಂಪನಿಗಳು ಬೆಳಿಗ್ಗೆಯಿಂದಲೇ ಉಪಕರಣಗಳನ್ನು ಜೋಡಿಸುವಲ್ಲಿ ನಿರತರಾಗಿದ್ದರು. ಭತ್ತದ ಗದ್ದೆಗಳಲ್ಲಿ ಬಳಸುವ ವಿವಿಧ ಬಗೆಯ ಕೃಷಿ ಯಂತ್ರೋಪಕರಣಗಳು, ರಾಶಿ ಮಷಿನ್, ವಿವಿಧ ಕಂಪನಿಗಳ ದೊಡ್ಡ ಮತ್ತು ಸಣ್ಣ ಟ್ರ್ಯಾಕ್ಟರ್‌ಗಳು, ನೆಲ್ಲು ಕೊಯ್ಯುವ ಮಷಿನ್, ಕ್ರಿಮಿನಾಶಕ ಸಿಂಪಡಿಸುವ ಯಂತ್ರೋಪಕರಣಗಳು ಸೇರಿದಂತೆ ಹಲವು ಬಗೆಯ ಕೃಷಿ ಯಂತ್ರಗಳ ಮಾರಾಟ ಕಂಪನಿಗಳು ರೈತ ದಸರಾದಲ್ಲಿ ಸ್ಟಾಲ್‌ಗಳನ್ನು ಹಾಕಿವೆ.
ವಿವಿಧ ಇಲಾಖೆಯ ಸ್ಟಾಲ್‌ಗಳು
ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯ ಸ್ಟಾಲ್‌ಗಳೂ ಇವೆ. ಇಡೀ ಎಪಿಎಂಸಿ ಪ್ರಾಂಗಣ ರೈತಮಯವಾಗಿದೆ. ಕೃಷಿ, ಮೀನುಗಾರಿಕೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಸ್ಟಾಲ್ ನಿರ್ವಹಣೆ ಸೇರಿದಂತೆ ಹಲವು ಕೆಲಸ ಕಾರ್ಯಗಳಲ್ಲಿ ಬೆಳಿಗ್ಗೆಯಿಂದಲೇ ತೊಡಗಿಕೊಂಡಿದ್ದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಉದ್ಘಾಟನೆ
ದಸರಾ ಉತ್ಸವ ವೇದಿಕೆ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಲಿದ್ದು, ಈಗಾಗಲೇ ವೇದಿಕೆ ಸಿದ್ಧಗೊಳಿಸಲಾಗಿದೆ. ಗ್ರಾಮೀಣ ಸೊಗಡಿನಲ್ಲಿ ನಿರ್ಮಿಸಿರುವ ವೇದಿಕೆ ನೋಡುಗರ ಗಮನ ಸೆಳೆಯುತ್ತಿದೆ. ರೈತ ದಸರಾಕ್ಕೆ ಅಪಾರ ಸಂಖ್ಯೆಯ ರೈತರು ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.