ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 20
ಒಂದಲ್ಲಾ.. ಎರಡಲ್ಲ… ಬರೋಬ್ಬರಿ ಹದಿನೈದು ವರ್ಷವಾದ್ರೂ ಇಲ್ಲೊಬ್ಬ ಗುತ್ತಿಗೆದಾರರ ಬಿಲ್ ಪಾವತಿಯಾಗಿಲ್ಲ ! ಇಲಾಖೆಯ ತುಂಡು ಗುತ್ತಿಗೆ ಕಾಮಗಾರಿ ಕೈಗೊಂಡು 11 ವರ್ಷಗಳ ಕಾಲ ಕಚೇರಿಗೆ ಅಲೆದಾಡಿದ್ರೂ ಜಪ್ಪಯ್ಯ ಎನ್ನದ ಅಧಿಕಾರಿಗಳು, ಕೋರ್ಟ್ ನಿಂದ ವಾಹನ ಜಪ್ತಿ ಆದೇಶ ಹೊರಬೀಳುತ್ತಿದ್ದಂತೆ ಎದ್ದೆನೋ.. ಬಿದ್ದೆನೋ..!! ಎನ್ನುತ್ತ ನ್ಯಾಯಾಲಯಕ್ಕೆ ಹಾಜರಾಗಿ ತಡೆಯಾಜ್ಞೆ ತಂದಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ ?
ಕಳೆದ 2009-10ನೇ ಸಾಲಿನ ನೆರೆಹಾವಳಿ ಯೋಜನೆ ಅಡಿಯಲ್ಲಿ ತಾಲೂಕಿನ ವೀರಾಪುರ ಗ್ರಾಮದಲ್ಲಿ 15 ವರ್ಷಗಳ ಹಿಂದೆ 4 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರ ಚನ್ನಬಸಪ್ಪ ಹತ್ತಿಗುಡ್ಡ ಇಲಾಖೆಯ ಆದೇಶದಂತೆ ನಿರ್ವಹಿಸಿದ್ದರು. ಕಾಮಗಾರಿ ಪೂರ್ಣಗೊಂಡ ನಂತರ ಬಿಲ್ ಪಾವತಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಸಿಂಧನೂರು ಉಪ ವಿಭಾಗದ ಅಧಿಕಾರಿಗಳ ಮೊರೆ ಹೋಗಿದ್ದರು. ಕಾಮಗಾರಿ ಬಿಲ್ ಬಿಡುಗಡೆ ಮಾಡಲು ಹಲವು ವರ್ಷಗಳ ಕಾಲ ಅಧಿಕಾರಿಗಳು ಸತಾಯಿಸಿದ ಕಾರಣ ಗುತ್ತಿಗೆದಾರರು ಕಾನೂನು ಮೊರೆ ಹೋಗಿದ್ದರು.

ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ದಾಖಲು
ಗುತ್ತಿಗೆದಾರರು ದಾವೆಯನ್ನು ಸಿಂಧನೂರಿನ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು. ನ್ಯಾಯಾಲಯ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರೂ ಸಹ ಇಲಾಖೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹಾಗಾಗಿ ಪ್ರಕರಣದ ದಾಖಲಾತಿಗಳನ್ನು ವಿಚಾರಣೆಗೆ ಒಳಪಡಿಸಿದ ನ್ಯಾಯಾಲಯ ಏಕಪಕ್ಷೀಯ ಆದೇಶದೊಂದಿಗೆ ಒಟ್ಟು ಬಿಲ್ ಬಾಕಿ ಮೊತ್ತ ರೂ.2,12,756ಗೆ 2010ರಿಂದ ಬಡ್ಡಿ ಸೇರಿ ಒಟ್ಟು ರೂ.8,22,516 ಗಳನ್ನು ಗುತ್ತಿಗೆದಾರರಿಗೆ ನೀಡಬೇಕೆಂದು ದಿ: 15-03-2025ರಂದು ಆದೇಶ ಹೊರಡಿಸಿದ್ದರೂ ಸಹ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.
ಆದೇಶ ಜಾರಿ ಪ್ರಕರಣ ದಾಖಲು
ತದನಂತರ ಗುತ್ತಿಗೆದಾರರು ನ್ಯಾಯಾಲಯದ ಆದೇಶದ ಪಾಲನೆಗೆ ಮತ್ತೊಂದು ಆದೇಶ ಜಾರಿ ಪ್ರಕರಣವನ್ನು ದಾಖಲು ಮಾಡಿದ್ದರು. ನ್ಯಾಯಾಲಯ ಆದೇಶ ಜಾರಿ ಪ್ರಕರಣದ ಮೇಲೆ ದಿ.10-06-2025ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಿಲ್ಲಾ ಪಂಚಾಯಿತಿ ರಾಯಚೂರು, ಇಇ ಪಂಚಾಯತ್ ರಾಜ್ ಇಂಜಿನಿಯರಿAಗ್ ಇಲಾಖೆ ರಾಯಚೂರು ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಉಪ ವಿಭಾಗ ಸಿಂಧನೂರು ಇವರ ವಾಹನಗಳ ಜಪ್ತಿಗೆ ವಾರಂಟನ್ನು ಹೊರಡಿಸಿತ್ತು.
ತಡೆಯಾಜ್ಞೆ
ದಿ.15-07-2025ರಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಇವರ ಬುಲೆರೊ ವಾಹನ (ಕೆಎ36, ಜಿ0852) ವನ್ನು ನ್ಯಾಯಾಲಯದ ಸಿಬ್ಬಂದಿ ಮತ್ತು ಪ್ರಕರಣ ದಾಖಲಿಸಿದ ಗುತ್ತಿಗೆದಾರ ಮತ್ತು ಅವರ ವಕೀಲರಾದ ಮಿಥುನ್ ಕುಮಾರ್‌ರ ಸಮ್ಮುಖದಲ್ಲಿ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ತದನಂತರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ಇವರು ಅದೇ ದಿನ ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಕಾರಣ ನ್ಯಾಯಾಲಯವು ಈ ವಾಹನವನ್ನು ಬಿಡುಗಡೆಗೊಳಿಸಿರುತ್ತದೆ.
ಕೋಟ್
ಕಳೆದ 15 ವರ್ಷಗಳಿಂದ ಬಿಲ್ ಪಾವತಿಗೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಿದರೂ ಇಲಾಖೆಯವರು ಇಲ್ಲಿಯವರೆಗೂ ನಾನು ಮಾಡಿದ ಕೆಲಸಕ್ಕೆ ಹಣ ಪಾವತಿಸದೇ ವಿಳಂಬ ಧೋರಣೆ ಅನುಸರಿಸಿದ್ದಾರೆ. ನಾನು ಹೊರಗಡೆ ಸಾಲ ಪಡೆದು ತುಂಡು ಕಾಮಗಾರಿ ನಿರ್ವಹಿಸಿದ್ದು, ಇದರಿಂದ ಆರ್ಥಿಕ ಸಂಕಷ್ಟಕ್ಕೀಡಾಗಿದ್ದೇನೆ. ಆದರೆ ಇಲಾಖೆಯವರು ನ್ಯಾಯಾಲಯದ ಆದೇಶಕ್ಕೂ ಬೆಲೆ ನೀಡದೇ ವರ್ತಿಸುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ಬಹಳಷ್ಟು ನೊಂದಿದ್ದೇನೆ, ಇದು ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಗೆ ಜ್ವಲಂತ ಸಾಕ್ಷಿಯಾಗಿದೆ. ಇನ್ಯಾದರೂ ಇಲಾಖೆ ನ್ಯಾಯಾಲಯದ ಆದೇಶದಂತೆ ನನಗೆ ಬರಬೇಕಾದ ಹಣ ಪಾವತಿಸಬೇಕು.
- ಚನ್ನಬಸಪ್ಪ ಹತ್ತಿಗುಡ್ಡ, ಪ್ರಥಮ ದರ್ಜೆ ಗುತ್ತಿಗೆದಾರರು