ಸಿಂಧನೂರು: ಸೆ.18ರಂದು ಸಂಗನಾಳನಲ್ಲಿ ಸೌಹಾರ್ದ ಸಮಾವೇಶ

Spread the love

ಸಿಂಧನೂರು, ಸೆಪ್ಟೆಂಬರ್ 17
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕ ಯಮನೂರಪ್ಪ ಕೊಲೆ ಖಂಡಿಸಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಹಾಗೂ ಕೊಲೆ ಘಟನೆಗಳಿಗೆ ಕಡಿವಾಣ ಹಾಕಲು ಆಗ್ರಹಿಸಿ, ಸೆ.18ರಂದು ಸಂಗನಾಳ ಗ್ರಾಮದಲ್ಲಿ ಸೌಹಾರ್ದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಪರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಿ.ಎನ್.ಯರದಿಹಾಳ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕೊಪ್ಪಳ ಜಿಲ್ಲೆಯಲ್ಲಿ ಜಾತಿ ತಾರತಮ್ಯ ಹೆಚ್ಚುತ್ತಿದೆ. ಮೇಲಿಂದ ಮೇಲೆ ದುಷ್ಕೃತ್ಯಗಳು ನಡೆಯುತ್ತಿದ್ದು, ದಲಿತ ಮತ್ತು ಶೋಷಿತ ಸಮುದಾಯಗಳ ಜನರು ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಸಂವಿಧಾನದ ಕಲಂ 15 “ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯದ ನಿಷೇಧವಿದ್ದು, ರಾಜ್ಯವು ಯಾರೇ ನಾಗರಿಕನ ವಿರುದ್ಧ ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾವುದೇ ತಾರತಮ್ಯವನ್ನು ಮಾಡತಕ್ಕದ್ದಲ್ಲ” ಹೇಳುತ್ತದೆ. ಆದರೆ ಜಾತಿ ಪದ್ಧತಿ, ಅಸ್ಪೃಶ್ಯತೆ ಆಚರಣೆ ನಿರಂತರವಾಗಿ ಮುಂದುವರಿದಿದೆ. ಕೂಡಲೇ ಕೊಪ್ಪಳ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೊಪ್ಪಳದ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ದಿನಾಂಕ: 17-09-2024ರಂದು ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಿಂದ ಸಂಗನಾಳವರೆಗೆ ಪಾದಯಾತ್ರೆಗೆ ಚಾಲನೆ ದೊರೆತಿದ್ದು, 18-09-2024ರಂದು ಸಂಗನಾಳ ಗ್ರಾಮದಲ್ಲಿ ಸೌಹಾರ್ದ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು, ವಿದ್ಯಾರ್ಥಿ, ಯುವಜನರು, ಮಹಿಳೆಯರು, ರೈತರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೌಹಾರ್ದ ಸಂದೇಶ ಸಾರಬೇಕೆಂದು ಬಿ.ಎನ್.ಯರದಿಹಾಳ ಮನವಿ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *