ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 15
ಮಸ್ಕಿ ವಿಧಾನಸಭಾ ಕ್ಷೇತ್ರದ ಮ್ಯಾದರಾಳ ಗ್ರಾಮದ 15 ತಿಂಗಳ ಮಗುವೊಂದು ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟ ಧಾರುಣ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಚಿಕಿತ್ಸೆಗಾಗಿ ಸಿಂಧನೂರು ತಾಯಿ-ಮಕ್ಕಳ ಆಸ್ಪತ್ರೆಗೆ ದಾಖಲಿಸಲು ಪಾಲಕರು ಕರೆತಂದಿದ್ದಾರೆ ಅಷ್ಟರೊಳಗೆ ತೀವ್ರ ಅಸ್ವಸ್ಥಗೊಂಡ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಮಗು ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ತಂದೆ ನಾಗಪ್ಪ, ತಾಯಿ ರೇಣುಕಮ್ಮ ಹಾಗೂ ಮಗುವಿನ ಸಂಬಂಧಿಗಳು ಕಣ್ಣೀರಾದರು.
ಮಗುವಿಗೆ ಸಕಾಲಕ್ಕೆ ದೊರೆಯದ ಚಿಕಿತ್ಸೆ
ಮೂತ್ರ ವಿಸರ್ಜನೆಗೆ ಸಮಸ್ಯೆ ಎದುರಿಸುತ್ತಿದ್ದ ಮಗುವನ್ನು ಮಸ್ಕಿ ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ಪಾಲಕರು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಸಮಸ್ಯೆ ಉಲ್ಬಣಿಸಿದೆ ಎಂದು ಹೇಳಲಾಗುತ್ತಿದೆ. ಕೊನೆಗೆ ಹೆಚ್ಚಿನ ಚಿಕಿತ್ಸೆಗೆ ಸಿಂಧನೂರು ತಾಯಿ ಮಕ್ಕಳ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಗು ಮೃತಪಟ್ಟಿದೆ.
ʼಮಸ್ಕಿ ಕ್ಷೇತ್ರದ ಗ್ರಾಮೀಣ ಪ್ರದೇಶದ ಜನರ ಗೋಳು ಕೇಳುವವರಿಲ್ಲʼ
ʼಮಸ್ಕಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಜನರಿಗೆ ಕನಿಷ್ಠ ಚಿಕಿತ್ಸಾ ಸೌಲಭ್ಯಗಳಿಲ್ಲ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಲಿಂಗಸುಗೂರು, ಸಿಂಧನೂರು, ಕುಷ್ಟಗಿ, ಮಾನ್ವಿ ಹೀಗೆ ಸಮೀಪದ ಆಯಾ ತಾಲೂಕು ಕೇಂದ್ರದ ಆಸ್ಪತ್ರೆಗಳಿಗೆ ಅಲೆದಾಡಬೇಕಿದೆ. ಮಸ್ಕಿ ತಾಲೂಕು ಕೇಂದ್ರವಾಗಿದ್ದರೂ ಇಲ್ಲಿಯವರೆಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯಾಗಲಿ, ಕನಿಷ್ಠ ಸಮುದಾಯ ಆರೋಗ್ಯ ಕೇಂದ್ರವಾಗಲಿ ನಿರ್ಮಾಣವಾಗದಿರುವುದು, ಮೀಸಲು ಕ್ಷೇತ್ರದ ಜನರು ಇನ್ನಿಲ್ಲದ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಸಂಘಟನೆಯ ಮುಖಂಡರೊಬ್ಬರು ದೂರುತ್ತಾರೆ.
