ನಮ್ಮ ಸಿಂಧನೂರು, ಮೇ 1
ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸುವಂತೆ ದೇಶದ ರೈತರು ಕೇಂದ್ರ ಸರ್ಕಾರಕ್ಕೆ ಅಲವತ್ತುಕೊಂಡರೂ ಆ ಬಗ್ಗೆ ಕಿಂಚಿತ್ತೂ ಗಮನಹರಿಸದ ಪ್ರಧಾನಿ ಮೋದಿಯವರು ಹಾಗೂ ಬಿಜೆಪಿ ಈ ದೇಶದ ಹಿಂದೂ ಮಹಿಳೆಯರ ಮಂಗಳಸೂತ್ರವನ್ನು ಪರೋಕ್ಷವಾಗಿ ಕಸಿಯುತ್ತಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆಪಾದಿಸಿದರು.
ನಗರದಲ್ಲಿ ಎಐಟಿಯುಸಿಯಿಂದ ರೈತ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ರೈತರು ವರ್ಷದಿಂದ ವರ್ಷಕ್ಕೆ ಸಾಲದ ಸುಳಿಯಲ್ಲಿ ಸಿಲುಕಿ ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೀಗಾಗಿ ಕೃಷಿ ಕುಟುಂಬಗಳು ಮನೆಯ ಯಜಮಾನನನ್ನು ಕಳೆದುಕೊಳ್ಳುತ್ತಿದ್ದಾರೆ. ಮಂಗಳಸೂತ್ರದ ಬಗ್ಗೆ ಮಾತನಾಡುವ ಮೋದಿಯವರು ಹಾಗಾದರೆ ರೈತರ ಬೇಡಿಕೆಯನ್ನು ಈಡೇರಿಸದೇ ಹಿಂದೂ ಮಹಿಳೆಯರ ತಾಳಿಯನ್ನು ಕಸಿಯುತ್ತಿರುವವರು ಯಾರು ಎಂಬುದನ್ನು ಜನರ ಮುಂದೆ ಹೇಳಬೇಕು ಎಂದು ಪ್ರಶ್ನಿಸಿದರು.
ಈ ದೇಶದಲ್ಲಿ ಸಂಪತ್ತನ್ನು ಸೃಷ್ಟಿ ಮಾಡುತ್ತಿರುವವರು ಶ್ರಮಿಕರು-ಕಾರ್ಮಿಕರು. ಆದರೆ ಅದು ಧನಿಕರ ಪಾಲಾಗಿದೆ. ಶ್ರಮಿಕರು ಹಾಗೂ ಕಾರ್ಮಿಕರು ಸಂಪತ್ತನ್ನು ಸೃಷ್ಟಿ ಮಾಡದೇ ಹೋದರೆ ಶ್ರೀಮಂತರು ದುಡ್ಡು ತಿಂದು ಬದುಕಲು ಸಾಧ್ಯವೇ ? ಹಾಗಾಗಿ ಶ್ರಮಿಕ ವರ್ಗ ಸೃಷ್ಟಿಸಿದ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕಿದೆ. ಅಂಬಾನಿ ತನ್ನ ಮಗನ ಮದುವೆಗೆ 1200 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಅವರ ಮದುವೆಯಲ್ಲಿ 2 ಗಂಟೆ ನೃತ್ಯ ಮಾಡಲು ನೃತ್ಯಗಾತಿಯೊಬ್ಬರಿಗೆ ಕೊಟ್ಟ ಹಣ 75 ಕೋಟಿ ರೂಪಾಯಿ. ಆದರೆ ಬಡವರು ಮದುವೆ ಮಾಡಬೇಕೆಂದರೆ ಇವತ್ತಿನ ದಿನ ಎಷ್ಟೊಂದು ಕಷ್ಟ ಅನುಭವಿಸಬೇಕಿದೆ. ಶ್ರಮಿಕರ-ಕಾರ್ಮಿಕರನ್ನು ಶೋಷಣೆ ಮಾಡಿ ಶ್ರೀಮಂತರು ಮೆರೆಯುತ್ತಿದ್ದಾರೆ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ 10 ವರ್ಷಗಳಲ್ಲಿ ದೇಶದಲ್ಲಿ ಅಸಮಾನತೆ ಮಿತಿ ಮೀರಿದೆ ಎಂದು ಹೇಳಿದರು.
ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಎಲ್ಲಿ ?
ಬಡವರ ಜೇಬಿನ ಹಣವನ್ನು ಕಿತ್ತಿ ಬಿಜೆಪಿ ಶ್ರೀಮಂತರಿಗೆ ಕೊಡುತ್ತಿದೆ. 2014ರ ಚುನಾವಣೆಯಲ್ಲಿ ವಿದೇಶದಿಂದ ಕಪ್ಪು ಹಣ ತರುತ್ತೇನೆ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇನೆ, ಬೆಲೆ ಏರಿಕೆಯನ್ನು ತಡೆಯುತ್ತೇನೆ, ವರ್ಷಕ್ಕೆ 2 ಕೋಟಿ ಉದ್ಯೋಗ, 2022ಕ್ಕೆ ಎಲ್ಲರಿಗೂ ಮನೆ, ರೈತರ ಆದಾಯ ದ್ವಿಗುಣ ಮಾಡುತ್ತೇನೆ ಹೀಗೆ ನೂರಾರು ಭರವಸೆಗಳನ್ನು ಕೊಟ್ಟು ಆಡಳಿತಕ್ಕೆ ಬಂದ ಮೋದಿಯವರು ಇದುವರೆಗೂ ಆ ಭರವಸೆಗಳನ್ನು ಈಡೇರಿಸದೇ ಜನರಿಗೆ ಮಂಕುಬೂದಿ ಎರಚಿದ್ದಾರೆ. ಅಲ್ಲದೇ ಎರಡನೇ ಬಾರಿಯೂ ಪುಲ್ವಾಮಾ ದಾಳಿಯ ನೆಪಮಾಡಿಕೊಂಡು ಸರ್ಜಿಕಲ್ ಸ್ಟ್ರೈಕ್ ಮೂಲಕ ದೇಶದ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಇಲ್ಲಿಯವರೆಗೆ ಜನರಿಗೆ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.
ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ
ಮೋದಿ ಸರ್ಕಾರ ಈ ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ರೈಲ್ವೆ, ಬಂದರು, ವಿಮಾನ ನಿಲ್ದಾಣ, ಸಾರ್ವಜನಿಕ ಉದ್ಯಮಗಳನ್ನು ರಾಷ್ಟ್ರೀಯ ನಗದೀಕರಣದ (ಎನ್‌ಎಂಪಿ) ಮೂಲಕ ಖಾಸಗಿ ಉದ್ಯಮಿಗಳಿಗೆ ಅವುಗಳನ್ನು ಗುತ್ತಿಗೆ ನೀಡುತ್ತಿದೆ. ಆ ಮೂಲಕ ಈ ದೇಶದ ಜನರ ಶ್ರಮದಿಂದ ಕಟ್ಟಿ ಬೆಳೆಸಿದ ಸರ್ಕಾರಿ ಸಂಸ್ಥೆಗಳು ಅನಾಯಾಸವಾಗಿ ಖಾಸಗಿ ಸಂಸ್ಥೆಗಳ ಪಾಲಾಗುತ್ತಿವೆ. ಕಾರ್ಮಿಕ ವಿರೋಧಿ ಲೇಬರ್ ಕೋಡ್ ಜಾರಿಗೆ ತರುವ ಮೂಲಕ ಶ್ರಮಿಕರನ್ನು ಶೋಷಿಸಲು ಮುಂದಾಗಿದೆ. ಈ ದೇಶದ ಸಂಪತ್ತನ್ನು ಕಾರ್ಪೊರೇಟ್ ಕುಳಗಳಿಗೆ ಧಾರೆಯೆರೆಯುತ್ತಿರುವ ಬಿಜೆಪಿಯನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ಅದಕ್ಕೆ ತಕ್ಕ ಪಾಠ ಕಲಿಸಲೇಬೇಕಿದೆ ಎಂದರು.
ಬಿಜೆಪಿಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ !
ಬಿಜೆಪಿ ಮತ್ತು ಬಿಜೆಪಿ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಉನ್ನಾವೋ, ಹತ್ರಾಸ್, ಕಥುವಾ ಸೇರಿದಂತೆ ಸದ್ಯ ಇಡೀ ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿರುವ ಹಾಸನ ಸಂಸದರೊಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಪ್ರಕರಣ ಕುರಿತಂತೆ ಹೀಗೆ ಸಾಲು ಸಾಲು ಪ್ರಕರಣಗಳಲ್ಲಿ ಬಿಜೆಪಿಯ ಹಲವರು ಭಾಗಿಯಾದ ಬಗ್ಗೆ ‘ಭೇಟಿ ಪಡಾವೋ, ಭೇಟಿ ಬಚಾವೋ’ ಎಂದು ಹೇಳುವ ಮೋದಿಯವರು ಎಂದೂ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ನಿಜಕ್ಕೂ ನಾವು ಬಿಜೆಪಿಯವರಿಂದ ಮಹಿಳೆಯರು ಮತ್ತು ಯುವತಿಯರನ್ನು ಪಾರು ಮಾಡಬೇಕಿದೆ ಎಂದು ಪರೋಕ್ಷವಾಗಿ ಕುಟುಕಿದರು. ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ ಪ್ರಾಸ್ತಾವಿಕ ಮಾತನಾಡಿದರು. ಡಿ.ಎಚ್.ಕಂಬಳಿ ನಿರ್ವಹಿಸಿದರು. ಎಐಕೆಎಸ್‌ನ ಚಂದ್ರಶೇಖರ ಕ್ಯಾತ್ನಟ್ಟಿ, ತಿಪ್ಪಯ್ಯಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.