(ವಿಶೇಷ ವರದಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 19
ಸಿಂಧನೂರಿನ ಹಳ್ಳದ ರಸ್ತೆ ವಿಸ್ತರಣೆ ಆಗಿದ್ದರಿಂದ ಟ್ರಾಫಿಕ್ ಕಿರಿಕಿರಿ ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದ್ದು, ಸೇತುವೆ ಮೇಲಿನ ಹಳೆಯ ಡಾಂಬರ್ ರಸ್ತೆ ಕಿತ್ತುಹೋಗಿ ತಗ್ಗು-ದಿನ್ನೆಗಳು ಬಿದ್ದ ಕಾರಣ ವಾಹನ ಚಾಲಕರು ಚಾಲನೆಗೆ ಭೀತಿ ಎದುರಿಸುತ್ತಿದ್ದಾರೆ. ಬಸ್ಸು, ಲಾರಿ ಅಥವಾ ಟಿಪ್ಪರ್‌ಗಳು ಬರ‍್ರನೇ ಹೋಗುತ್ತಿದ್ದಂತೆ ಹಳೆಯ ಡಾಂಬರ್ ರಸ್ತೆ ಕಿತ್ತಿಹೋಗಿ ವಿಪರೀತ ಧೂಳು ಮೇಲೇಳುತ್ತಿದೆ. ಈ ಸಮಯದಲ್ಲಿ ಹಿಂಬದಿಯಲ್ಲಿ ಹೋಗುವ ದ್ವಿಚಕ್ರ ವಾಹನ ಸವಾರರು ಚಾಲನೆಗೆ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.ಹಳ್ಳದ ಸೇತುವೆ ವಿಶಾಲವಾಗಿದ್ದು ಒಂದು ಕಡೆ ಹೋಗುವ, ಇನ್ನೊಂದು ಕಡೆಯಿಂದ ಬರುವ ವಾಹನಗಳಿಗೆ ತುಂಬಾ ಅನುಕೂಲವಾಗಿದೆ. ಆದರೆ, ಹೊಸದಾಗಿ ಸೇತುವೆ ನಿರ್ಮಿಸಿ ತಡೆಗೋಡೆಗಳಿಗೆ ಪೇಂಟ್ ಬಳಿದು ಕೈಬಿಡಲಾಗಿದ್ದು, ಸೇತುವೆಯ ಮೇಲಿನ ಹಳೆ ರಸ್ತೆಗೆ ಡಾಂಬರ್ ಹಾಕುವುದು, ಸೇತುವೆ ಪ್ರವೇಶದ ಮುನ್ನ ಕಿತ್ತಿಹೋಗಿರುವ ಹಳೆ ರಸ್ತೆಯನ್ನು ದುರಸ್ತಿ ಮಾಡದೇ ಹಾಗೆಯೇ ಬಿಟ್ಟಿರುವುದು ಅಪಘಾತಕ್ಕೆ ಆಹ್ವಾನ ನೀಡಿದಂತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಟ್ರಾಫಿಕ್ ಕಿರಿಕಿರಿ
ಪ್ರತಿ ಸೋಮವಾರ ಮತ್ತು ಮಂಗಳವಾರ ಸಂತೆಯ ಕಾರಣ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ಜಾಸ್ತಿ. ಈ ದಿನಗಳಂದು ವಾಹನ ದಟ್ಟಣೆ ನಿಭಾಯಿಸುವುದೇ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ರಾಯಚೂರು, ಕುಷ್ಟಗಿ ಹಾಗೂ ಗಂಗಾವತಿ ಮಾರ್ಗದ ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತವೆ. ಹಳ್ಳದ ಸಂಪರ್ಕ ಸೇತುವೆ ವಿಸ್ತರಣೆ ಮಾಡಿದ್ದರಿಂದ ಒಂದಿಷ್ಟು ಟ್ರಾಫಿಕ್ ತಪ್ಪಿದ್ದು, ಹಳ್ಳದ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ಇಲ್ಲವೆ, ಡಾಂಬರೀಕರಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕಿದೆ ಎನ್ನುವುದು ವಾಹನ ಸವಾರರ ಒತ್ತಾಯವಾಗಿದೆ.
ಎರಡೂ ಪ್ರವೇಶ ಮಾರ್ಗದಲ್ಲಿ ರಸ್ತೆ ದುಃಸ್ಥಿತಿ:
ಹಳ್ಳದ ಸೇತುವೆಗೆ ರಾಯಚೂರು ಹಾಗೂ ಗಂಗಾವತಿ ಮಾರ್ಗದ ಕಡೆಯಿಂದ ಪ್ರವೇಶಿಸುವ ರಸ್ತೆಯಲ್ಲಿ ತಗ್ಗು ದಿನ್ನೆಗಳಿದ್ದು ಮತ್ತು ಸೇತುವೆಯ ಮೇಲಿನ ಹಳೆಯ ಡಾಂಬರ್ ರಸ್ತೆ ಕಿತ್ತುಹೋಗಿರುವುದರಿಂದ ಇನ್ನಷ್ಟು ಸಮಸ್ಯೆಯಾಗಿದೆ. ಇನ್ನು ಎಲ್‌ಐಸಿ ಆಫೀಸ್ ಮುಂದುಗಡೆ ಇರುವ ರಸ್ತೆಯಲ್ಲಿ ಜೋಡಿಸಿದ ಸಿಮೆಂಟ್ ನೆಲಹಾಸು ಕಲ್ಲುಗಳು ಕಿತ್ತುಹೋಗಿದ್ದು, ದ್ವಿಚಕ್ರವಾಹನ ಚಾಲನೆಯ ಸಂದರ್ಭದಲ್ಲಿ ಗಾಡಿ ನಿಯಂತ್ರಣ ತಪ್ಪಿ ಬಿದ್ದು ಗಾಯಮಾಡಿಕೊಂಡಿರುವ ಬಗ್ಗೆ ಸವಾರರು ಹೇಳುತ್ತಾರೆ.