ಸಿಂಧನೂರು, ಡಿಸೆಂಬರ್ 19
ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಬಿಜೆಪಿ ಮುಖಂಡ ಕೆ.ಕರಿಯಪ್ಪ ಅವರು ಗುರುವಾರ ಬೆಳಿಗ್ಗೆ ಭೇಟಿಯಾಗಿ ಆಸ್ಪತ್ರೆಯನ್ನು ಪರಿಶೀಲಿಸಿ, ಒಳರೋಗಿಗಳ ಆರೋಗ್ಯ ವಿಚಾರಿಸಿದರು. ನಂತರ ಆಸ್ಪತ್ರೆಯಲ್ಲಿನ ವಿವಿಧ ವಾರ್ಡ್ಗಳಲ್ಲಿನ ಅವ್ಯವಸ್ಥೆ, ಮೂಲ ಸೌಕರ್ಯಗಳ ಕೊರತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಕರಿಯಪ್ಪ ಅವರು, “ರಾಜ್ಯದಲ್ಲಿ ಬಾಣಂತಿಯರ ಸಾವು-ನೋವುಗಳು ಹೆಚ್ಚುತ್ತಿವೆ. ಆದರೆ ಸರ್ಕಾರ ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಜಂಬ ಕೊಚ್ಚಿಕೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ಜನಸಾಮಾನ್ಯರಿಗೆ ಗುಣಮಟ್ಟದ ಚಿಕಿತ್ಸೆ ಸಿಗದೇ ಜನರು ಪರದಾಡುತ್ತಿದ್ದಾರೆ. ಪಂಚ ಗ್ಯಾರಂಟಿಗಳನ್ನು ನಿಲ್ಲಿಸಿದರೂ ಪರವಾಗಿಲ್ಲ, ಜನರಿಗೆ ಒಳ್ಳೆಯ ಆಸ್ಪತ್ರೆ, ಶಿಕ್ಷಣ, ರೈತರ ಜಮೀನುಗಳಿಗೆ ನೀರಿನ ಸೌಕರ್ಯ ಕಲ್ಪಿಸಬೇಕು. ಅದನ್ನು ಬಿಟ್ಟು ಕಾಲಹರಣ ಮಾಡುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿನ ಮಂಚಗಳು ತುಕ್ಕು ಹಿಡಿದಿವೆ. ಬಾಣಂತಿಯರಿಗೆ ಮತ್ತು ಗರ್ಭಿಣಿಯರಿಗೆ ಬಿಸಿ ನೀರಿನ ಸೌಕರ್ಯ ಇಲ್ಲ, ಶೌಚಾಲಯಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಎಲ್ಲಿ ನೋಡಿದರೂ ಸ್ವಚ್ಛತೆ ಕೊರತೆ ಕಾಣುತ್ತಿದೆ. ಹೆಸರಿಗಷ್ಟೇ 100 ಹಾಸಿಗೆ ಆಸ್ಪತ್ರೆ ಆಗಿದ್ದು, ಒಳಗಡೆ ಗಮನಿಸಿದರೆ ಸಂಪೂರ್ಣ ನಿರ್ಲಕ್ಷö್ಯ ವಹಿಸಲಾಗಿದೆ. ಹೀಗಾದರೆ ಆಸ್ಪತ್ರೆ ಇದ್ದು ಏನು ಅರ್ಥ ಎಂದು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಕೆ.ಕರಿಯಪ್ಪ ಅವರು ತರಾಟೆಗೆ ತೆಗೆದುಕೊಂಡರು. ಚಿಕಿತ್ಸೆ ಅರಸಿ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು.
ತಾಲೂಕಿನ ನಾಲ್ವರು ಬಾಣಂತಿಯರು ಮೃತಪಟ್ಟು ಸಂತ್ರಸ್ತ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೂ, ಆರೋಗ್ಯ ಸಚಿವರಾಗಲಿ, ಸರ್ಕಾರವಾಗಲಿ ಈವರೆಗೆ ಗಮನಹರಿಸಿಲ್ಲ. ಆ ಕುಟುಂಬಗಳಿಗೆ ಪರಿಹಾರ ನೀಡುವುದಿರಲಿ, ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ ಎಂದು ಸರ್ಕಾರ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರ ವಿರುದ್ಧ ಹರಿಹಾಯ್ದರು.
ಈ ವೇಳೆ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ವೆಂಕೋಬ ನಾಯಕ, ನಗರಸಭೆ ಸದಸ್ಯ ಕೆ.ಹನುಮೇಶ, ಮಲ್ಲಿಕಾರ್ಜುನ .ಕೆ.ರಾಜು ಅಡವಿಬಾವಿ, ಶರಣು ಗೊರೇಬಾಳ,ಪರಮೇಶ್ವರಪ್ಪ ದಡೇಸುಗೂರು, ಮಹಾದೇವ ನಾಯಕ, ಮುತ್ತು ಬರ್ಸಿ, ಶಿವು ಹಿರೇಮಠ, ನಮ್ಮ ಕರ್ನಾಟಕ ಸೇನೆಯ ಮಂಜುನಾಥ ಗಾಣಗೇರ, ರಾಜ್ಯ ಘಟಕದ ಕಾಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ ಸೇರಿದಂತೆ ಇನ್ನಿತರರಿದ್ದರು.