ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 03
ನಗರದ ವಾರ್ಡ್ ನಂ.13ರ ಭಗೀರಥ ಕಾಲೋನಿಯ ಮುಖ್ಯ ರಸ್ತೆ ಮಳೆ ನೀರಿನಿಂದಾಗಿ ಕೊಚ್ಚಿಗುಂಡಿಯಾಗಿದ್ದು, ಈ ರಸ್ತೆಯಲ್ಲಿ ಟಿಪ್ಪರ್ ಓಡಾಟದಿಂದಾಗಿ ಇನ್ನಷ್ಟು ಅಧ್ವಾನ ಸ್ಥಿತಿಗೆ ತಲುಪಿದೆ. ಕರಿಯಪ್ಪ ಲೇಔಟ್, ವಜೀರಪ್ಪ ಲೇಔಟ್ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಯೋಮಯವಾದ ಕಾರಣ ಇಲ್ಲಿನ ನಿವಾಸಿಗಳು ಸುತ್ತಿಬಳಿಸಿಕೊಂಡು ಮುಖ್ಯ ರಸ್ತೆ ತಲುಪುತ್ತಿದ್ದಾರೆ.
ಕುಡಿವ ನೀರಿನ ಪೈಪ್ಲೈನ್ಗೆ ಡ್ಯಾಮೇಜ್
ಈ ರಸ್ತೆಯಲ್ಲಿ ಟಿಪ್ಪರ್ವೊಂದು ಹಾದು ಹೋದ ಕಾರಣ ನಗರಸಭೆಯ ಕುಡಿಯುವ ನೀರಿನ ಪೈಪ್ಲೈನ್ ಒಡೆದು ಹೋಗಿದೆ. ಅಲ್ಲದೇ ಮನೆಗಳಿಗೆ ಸಂಪರ್ಕ ಕಲ್ಪಿಸುವ ಪೈಪ್ಗಳು ಹಾನಿಗೀಡಾಗಿವೆ. ಟಿಪ್ಪರ್ವೊಂದರ ಚಕ್ರಗಳು ಹುದುಲಲ್ಲಿ ಸಿಲುಕಿದ ಕಾರಣ, ಹುದುಲಿನಿಂದ ಲಾರಿಯನ್ನು ಹೊರತರಲು ಪರದಾಡಬೇಕಾಯಿತು. ಪೈಪ್ಲೈನ್ ಒಡೆದಿದ್ದರಿಂದ ದುರಸ್ತಿ ಕಾರ್ಯ ಬೆಳಿಗ್ಗೆಯಿಂದಲೇ ನಡೆದಿದೆ.
ನಿವಾಸಿಗಳಿಂದ ನಗರಸಭೆಗೆ ಮನವಿ
“ಈ ಮಾರ್ಗದ ಮುಖ್ಯ ರಸ್ತೆ, ಒಳರಸ್ತೆ, ಚರಂಡಿ ನಿರ್ಮಾಣ ಹಾಗೂ ಬೀದಿ ದೀಪ ಅಳವಡಿಸುವಂತೆ ಒತ್ತಾಯಿಸಿ 21-08-2024ರಂದು ನಗರಸಭೆಗೆ ಮನವಿಪತ್ರ ಸಲ್ಲಿಸಿ ಗಮನ ಸೆಳೆದಿದ್ದೇವೆ. ಇದಕ್ಕೂ ಮುನ್ನ14-02-2024ರಂದು ನಗರಸಭೆಗೆ ಇದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಲ್ಲಿನ ನಿವಾಸಿಗಳೂ ಮನವಿಪತ್ರ ನೀಡಿದ್ದೇವೆ. ಈ ಕುರಿತು ಶಾಸಕರು ಹಾಗೂ ಈ ವಾರ್ಡ್ನ ನಗರಸಭೆ ಸದಸ್ಯೆಯಾದ ನಾಗಮ್ಮ ಛತ್ರಪ್ಪ ಅವರ ಗಮನಕ್ಕೂ ತರಲಾಗಿದೆ. ಆದರೂ ಇಲ್ಲಿಯವರೆಗೂ ರಸ್ತೆ ಸುಧಾರಣೆಯಾಗಿಲ್ಲ. ಮಳೆಬಂದರೆ ಸಂಚರಿಸುವುದೇ ಕಷ್ಟವಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತ ಯಾಕೂಬ್ ಅಲಿ ಅವರು ತಿಳಿಸಿದ್ದಾರೆ.