ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 6
ಮಸ್ಕಿ ವಿಧಾನಸಭಾ ಕ್ಷೇತ್ರದ, ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವ್ಯಾಪ್ತಿಗೆ ಒಳಪಡುವ ಬಳಗಾನೂರು ವಾರ್ಡ್ ನಂ.7ರಲ್ಲಿರುವ ಬಸವೇಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ದಿನಗಳಿಂದ ಯಾರೊಬ್ಬರೂ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳ ಅಭ್ಯಾಸ ಕುಂಠಿತವಾಗಿರುವ ಕುರಿತಂತೆ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಹಾಗೂ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ವಿದ್ಯಾರ್ಥಿಗಳ ಪಾಲಕರು ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ದಿನಾಂಕ: 07-11-2024ರಿಂದಲೇ ಶಿಕ್ಷಿಯೊಬ್ಬರನ್ನು ತಾತ್ಕಾಲಿಕ ನಿಯೋಜನೆ ಮಾಡುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿ ಲಿಖಿತ ಭರವಸೆ ನೀಡಿದರು.
ಬಸವೇಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಕಳೆದ ಹಲವು ದಿನಗಳಿಂದ ಶಿಕ್ಷಕರಿಲ್ಲದ ಕಾರಣ ಅಭ್ಯಾಸವಿಲ್ಲದೇ ಖಾಲಿ ಸಮಯ ಕಳೆದು ಮನೆಗೆ ಹೋಗುತ್ತಿದ್ದಾರೆ. ಇಲ್ಲಿಯವರೆಗೂ ಶಿಕ್ಷಕರನ್ನು ನೇಮಿಸದೇ ನಿರ್ಲಕ್ಷö್ಯವಹಿಸಿರುವುದು ಸರಿಯಲ್ಲ. ಕೂಡಲೇ ಶಿಕ್ಷಕರನ್ನು ನೇಮಿಸಬೇಕು. ಇಲ್ಲದೇ ಹೋದರೆ ಬಿಇಒ ಆಫೀಸ್ ಮುಂದೆ ವಿದ್ಯಾರ್ಥಿಗಳು, ಪಾಲಕರು, ಎಸ್ಡಿಎಂಸಿ ಪದಾಧಿಕಾರಿಗಳು ಸೇರಿದಂತೆ ನಮ್ಮ ಸಂಘಟನೆಯಿಂದ ಧರಣಿ ಹೋರಾಟ ನಡೆಸುವುದಾಗಿ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಅವರು ಅಧಿಕಾರಿಗಳ ಗಮನ ಸೆಳೆದರು.
ಇದಕ್ಕೆ ಸ್ಪಂದಿಸಿದ ಬಿಇಒ ಆಫೀಸ್‌ನ ಅಧಿಕಾರಿ ಬಸವಲಿಂಗಪ್ಪ ಅವರು, “ನಾಳೆಯಿಂದ ತಾತ್ಕಾಲಿಕ ಶಿಕ್ಷಕಿಯೊಬ್ಬರನ್ನು ನಿಯೋಜನೆ ಮಾಡಲಾಗುವುದು. ತದನಂತರ ಖಾಯಂ ಶಿಕ್ಷಕರ ನೇಮಕಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಅಮರೇಶ ಬನ್ನೂರು, ವಿದ್ಯಾರ್ಥಿ ಪಾಲಕರಾದ ಮೌನೇಶ, ಕರಿಯಪ್ಪ, ಉದ್ದಂಡಪ್ಪ, ಅಡಿವೆಪ್ಪ, ನಂದಪ್ಪ, ಸಿದ್ದಯ್ಯ, ನಾಗರಾಜ, ಸಾಬಣ್ಣ, ಮಾಣಿಕರಾಜ, ಶರಣಪ್ಪ, ದಾದಸಾಬ್, ಅಯ್ಯಪ್ಪ, ಮೌನೇಶ, ಯರಿಯಪ್ಪ , ಹುಲುಗಪ್ಪ, ಶಿವರಾಜ ಸೇರಿದಂತೆ ಇನ್ನಿತರರಿದ್ದರು. ಈ ಕುರಿತು ನಮ್ಮ ಸಿಂಧನೂರು ನ್ಯೂಸ್ ವೆಬ್ “ಸಿಂಧನೂರು/ಮಸ್ಕಿ: ಬಳಗಾನೂರು ಬಸವೇಶ್ವರನಗರ ಸ.ಕಿ.ಪ್ರಾ ಶಾಲೆಯಲ್ಲಿ ವಿದ್ಯಾರ್ಥಿಗಳು 50, ಶಿಕ್ಷಕರು ಶೂನ್ಯ !!” ಶೀರ್ಷಿಕೆಯಡಿ ವಿಸ್ತೃತ ವರದಿಯನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.