ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 13
ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಬಾಬುಗೌಡ ಬಾದರ್ಲಿ ಅವರು ಭಾನುವಾರ ಅಧಿಕಾರ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರು, ಬೆಂಬಲಿಗರು ಹಾಗೂ ಹಿತೈಷಿಗಳ ಬೃಹತ್ ಮೆರವಣಿಗೆ ನಡೆಯಿತು.
ತೆರೆದ ವಾಹನದಲ್ಲಿ ಪೌರಾಡಳಿತ ಸಚಿವ ರಹೀಮ್‌ಖಾನ್, ಸಂಸದ ರಾಜಶೇಖರ್ ಹಿಟ್ನಾಳ್, ನೂತನ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಶಾಸಕ ಹಂಪನಗೌಡ ಬಾದರ್ಲಿ, ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಎಮ್ಮೆಲ್ಸಿ ಎ.ವಸಂತಕುಮಾರ್, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ ಹಾಗೂ ಪ್ರಾಧಿಕಾರದ ನೂತನ ಸದಸ್ಯರು ಸತ್ಯಾಗಾರ್ಡನ್‌ವರೆಗೆ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಗಾಂಧಿಸರ್ಕಲ್ ಬಳಿ ಇದ್ದಾಗ ಅಪಾರ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಜಮಾಯಿಸಿದ್ದು ಕಂಡುಬಂತು. ಈ ವೇಳೆ ಹಿಟಾಚಿಯ ಮೂಲಕ ಅಭಿಮಾನಿಗಳು, ಬೆಂಬಲಿಗರು ನಾಯಕರಿಗೆ ಹಿಟಾಚಿಯ ಮೂಲಕ ಹೂಮಳೆಗರೆದು, ಬೃಹತ್ ಹೂವಿನಹಾರ ಹಾಕಿದ್ದು ಗಮನ ಸೆಳೆಯಿತು. ನೂತನ ಅಧ್ಯಕ್ಷ ಬಾಬುಗೌಡ ಬಾದರ್ಲಿ ಅವರೊಂದಿಗೆ ನಾಮ ನಿರ್ದೇಶಿತ ಸದಸ್ಯರಾಗಿ ವೈ.ನರೇಂದ್ರನಾಥ ತಂದೆ ಸುಬ್ಬಾರಾವ್, ಚಂದ್ರಶೇಖರರೆಡ್ಡಿ ತಂದೆ ದೊಡ್ಡಪ್ಪ, ಖಾಜಿ ಮಲ್ಲಿಕ್ ತಂದೆ ಖಾಜಾ ಸಲೀಂ ಅಹ್ಮದ್ ವಕೀಲರು, ಮಮತ ಗಂಡ ಮೌಲಪ್ಪ ಇವರು ಅಧಿಕಾರ ಸ್ವೀಕರಿಸಿದರು.

ಶಕ್ತಿ ಪ್ರದರ್ಶನ:
ಬಾಬುಗೌಡ ಬಾದರ್ಲಿ ಅವರು ಸಿಂಧನೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ನಗರಕ್ಕೆ ಆಗಮಿಸಿದ್ದರು. ಬೆಳಿಗ್ಗೆಯಿಂದಲೇ ಶಾಸಕ ಹಂಪನಗೌಡ ಬಾದರ್ಲಿ ಅವರ ನಿವಾಸದ ಎದುರು ಅಪಾರ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದರು. ಮೆರವಣಿಗೆಯಲ್ಲಿ ತಲೆಗೆ ಗುಲಾಬಿ ರುಮಾಲು ಸುತ್ತಿಕೊಂಡು ಕಾರ್ಯಕರ್ತರು ಭಾಗವಹಿಸಿದ್ದು ಕಂಡುಬಂತು. ಅಲ್ಲದೇ ಬಾಬುಗೌಡ ಬೆಂಬಲಿಗರು ಬೈಕ್ ರ‍್ಯಾಲಿ ನಡೆಸಿದರು.
ರಾಜಕೀಯ ವಲಯದಲ್ಲಿ ಚರ್ಚೆ
ಬಾಬುಗೌಡ ಬಾದರ್ಲಿ ಅವರು ಹಾಲಿ ಶಾಸಕ ಹಂಪನಗೌಡ ಬಾದರ್ಲಿ ಅವರ ರಾಜಕೀಯ ಉತ್ತರಾಧಿಕಾರಿಯೆಂದೇ ರಾಜಕೀಯ ವಲಯದಲ್ಲಿ ಚರ್ಚಿತವಾಗುತ್ತಿದ್ದು, ಮುಂಬರುವ ಚುನಾವಣೆಯಷ್ಟೊತ್ತಿಗೆ ರಾಜಕೀಯ ಪ್ರಭಾವ ಬೆಳೆಸಲು ಈ ಸಮಾರಂಭ ಪರೋಕ್ಷವಾಗಿ ಶಕ್ತಿಪ್ರದರ್ಶನವೆಂದೇ ಹೇಳಲಾಗುತ್ತಿದೆ.
