ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 11
ದಸರಾ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರಕ್ಕೆ ರಾಶಿಗಟ್ಟಲೆ ಹೂವು, ಬೂದುಗುಂಬಳ, ಬಾಳೆಕಂದು ಬಂದಿದ್ದು, ಮಾರುಕಟ್ಟೆಗಳಲ್ಲಿ ಶುಕ್ರವಾರ ಖರೀದಿ ಭರಾಟೆ ಜೋರಾಗಿ ನಡೆಯಿತು. ನಗರದ ಗಾಂಧಿಸರ್ಕಲ್, ಕನಕದಾಸ ಸರ್ಕಲ್‌ನಲ್ಲಿ ಹೂವು ಸೇರಿದಂತೆ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿ ನಡೆಯಿತು. ಬೆಳಿಗ್ಗೆಯಿಂದಲೇ ಸಾರ್ವಜನಿಕರು ಖರೀದಿಗೆ ಆಗಮಿಸಿದ್ದು ಕಂಡುಬಂತು.
ಆಯುಧ ಪೂಜೆಯಂದು ವಾಹನ, ಯಂತ್ರಗಳು, ನಾನಾ ಬಗೆಯ ಮಾರಾಟ ಮಳಿಗೆಗಳಿಗೆ ಪೂಜೆ ಸಲ್ಲಿಸಲು ಹೂವು, ಬಾಳೆಕಂದು, ಬೂದುಗುಂಬಳ, ನಿಂಬೆಹಣ್ಣು ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹೀಗಾಗಿ ಇವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹಬ್ಬಕ್ಕೆ ಮುನ್ನಾದಿನವೇ ಲೋಡ್‌ಗಟ್ಟಲೆ ಹೂವು, ಬೂದಗುಂಬಳ ಮತ್ತು ನಿಂಬೆಹಣ್ಣು ಮಾರುಕಟ್ಟೆಗೆ ಬಂದಿವೆ.
ಹೂವು, ಹಣ್ಣು ಖರೀದಿ ಭರಾಟೆ
ಪೂಜೆಗೆ ಬೇಕಾದ ಹೂವು, ಹಣ್ಣು, ಬಾಳೆಗೊನೆ, ಕಬ್ಬು, ಬೂದುಗುಂಬಳಕಾಯಿ ಖರೀದಿ ಭರಾಟೆ ಕಂಡುಬಂತು. ಬೆಳಿಗ್ಗೆ 6 ಗಂಟೆಯಿAದಲೇ ನಗರದ ಗಾಂಧಿಸರ್ಕಲ್, ಸುಕಾಲಪೇಟೆ ಮಾರ್ಗದ ಕನಕದಾಸ ವೃತ್ತ, ಬಸವ ಸರ್ಕಲ್ ಬಳಿ, ಚನ್ನಮ್ಮ ಸರ್ಕಲ್ ಬಳಿ ಮಾರಾಟ ಜೋರಾಗಿ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಹಣ್ಣಿನ ದರವು ಸಾಮಾನ್ಯ ದಿನಗಳಿಗಿಂತ ಕೊಂಚ ಹೆಚ್ಚಳವಾಗಿತ್ತು. ಪೂಜೆ ವೇಳೆ ಒಡೆಯುವ ಬೂದುಕುಂಬಳ ಗಾತ್ರದ ಆಧಾರದ ಮೇಲೆ ಮಾರಾಟವಾಯಿತು. ಖರೀದಿ ಭರಾಟೆ ಹಿನ್ನೆಲೆಯಲ್ಲಿ ಪೂಜೆಗೆ ಇಡುವ ಸೇಬುಹಣ್ಣು, ದ್ರಾಕ್ಷಿ, ಮೋಸಂಬಿ, ಕಿತ್ತಳೆ, ದಾಳಿಂಬೆ, ಸೀತಾಫಲ, ಚಿಕ್ಕು, ಪ್ಯಾರಲೆ, ಏಲಕ್ಕಿ ಬಾಳೆ ದರ ಏರಿಕೆಯಾಗಿತ್ತು.
ಆಯುಧ ಪೂಜೆ
ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಆಯುಧಪೂಜೆಯ ಸಂಭ್ರಮ ಕಳೆಗಟ್ಟಿದೆ. ಆಯುಧ ಪೂಜೆ ನವರಾತ್ರಿ ಹಬ್ಬದ ಒಂದು ಭಾಗವಾಗಿದ್ದು, ದಸರಾ ಹಬ್ಬದ ಕೊನೆಯ ದಿನ ಶಸಾಸ್ತ್ರ ಹಾಗೂ ಸಾಧನಗಳನ್ನು ಪೂಜಿಸಲಾಗುತ್ತದೆ. ಮನೆ ಹಾಗೂ ಕಚೇರಿಯನ್ನು ಹೂಗಳಿಂದ ಅಲಂಕರಿಸಿ, ಶಸಾಸ್ತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಶಕ್ತಿ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಹಾಗೂ ಪಾರ್ವತಿ ದೇವಿಯನ್ನು ಪೂಜೆಸಲಾಗುತ್ತಿದೆ. ಯಂತ್ರಗಳು, ವಾಹನಗಳು ಮತ್ತಿತರ ಸಾಧನಗಳನ್ನು ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.