ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 15
ನಗರದ ಗಂಗಾವತಿ ಮಾರ್ಗದ ರಸ್ತೆಯ ರೈಲ್ವೆ ನಿಲ್ದಾಣಕ್ಕೆ ಹೋಗುವ ಕ್ರಾಸ್ ಎದುರಿನ ಹೆದ್ದಾರಿ ಹಾಗೂ ಕೋಟಕ್ ಮಹಿಂದ್ರಾ ಬ್ಯಾಂಕ್ ಎದುರಿಗೆ ಇರುವ ಹೆದ್ದಾರಿಯ ಡಿವೈಡರ್ ನಡುವಿನ ವಾಹನ ಪಾಸಿಂಗ್ ದಾರಿಯಲ್ಲಿ ಏಕಾಏಕಿ ಡಾಂಬರ್ ಕಿತ್ತು ಹಾಕಲಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಸೋಮವಾರ ಬೆಳಿಗ್ಗೆ ಕಂಡುಬಂತು. ಮೋಟರ್ ಸೈಕಲ್, ಆಟೋಗಳು, ಟಂಟಂ ಸೇರಿದಂತೆ ಇನ್ನಿತರೆ ವಾಹನಗಳ ಚಾಲಕರು ವಾಹನ ಚಾಲನೆ ಮಾಡಲು ತೊಂದರೆ ಅನುಭವಿಸಿದರು. ಇನ್ನೂ ಪಾದಾಚಾರಿಗಳು ಏಕಾಏಕಿ ಡಾಂಬರ್ ಕಿತ್ತು ಹಾಕಿದ್ದರಿಂದ ರಸ್ತೆ ದಾಟಲು ಆತಂಕ ಎದುರಿಸಿದರು. “ಹೆದ್ದಾರಿಯನ್ನೇ ಹೀಗೆ ರಾತ್ರೋ ರಾತ್ರಿ ಮನಬಂದಂತೆ ಕಿತ್ತಿ ಹಾಕಿದರೆ ಸಾರ್ವಜನಿಕರು ಹೇಗೆ ಸಂಚರಿಸಬೇಕು. ಕುಷ್ಟಗಿ ರಸ್ತೆಯಲ್ಲಿ ಇದೇ ರೀತಿ ಕಿತ್ತಿ ಹಾಕಿ ಬಸವ ಸರ್ಕಲ್ ಬಳಿ ದೊಡ್ಡ ದಿಮ್ಮಿ ಮಾಡಿ ಹಾಗೆಯೇ ಬಿಟ್ಟಿದ್ದಾರೆ. ಮನಸೋಇಚ್ಛೆ ರೋಡು ಕಿತ್ತಿ ಹಾಕುವುದು, ನಂತರ ಹಾಗೆಯೇ ಬಿಟ್ಟುಹೋಗುವುದು ಮಾಡಿದರೆ ಸಾರ್ವಜನಿಕರು ಎಲ್ಲಿಗೆ ಹೋಗಬೇಕು. ಸಂಬಂಧಿಸಿದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ” ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
