ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 11
ನಗರದ ವಿವಿಧ ಕಡೆ ಆಟೋ ಸ್ಟ್ಯಾಂಡ್‌ಗಳಿಗೆ ಅನುಕೂಲ ಕಲ್ಪಿಸಿ, ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸಲು ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಭಗತ್‌ಸಿಂಗ್ ಆಟೋ ಚಾಲಕರ ಸಂಘ ತಾಲೂಕು ಸಮಿತಿ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಸಿಂಧನೂರು ಜಿಲ್ಲೆಯಲ್ಲೇ ಪ್ರಮುಖ ನಗರವಾಗಿದ್ದು, ವಾಣಿಜ್ಯ ಕೇಂದ್ರವಾಗಿರುತ್ತದೆ. ದಿನವೂ ನಗರಕ್ಕೆ ಬಂದು- ಹೋಗುವವರ ಸಂಖ್ಯೆ ಹಾಗೂ ಸ್ಥಳೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಜನಸಾಮಾನ್ಯರಿಗೆ ಸ್ಥಳೀಯವಾಗಿ ಸಾರಿಗೆ ಸೇವೆ ಒದಗಿಸುವಲ್ಲಿ ಸ್ಥಳೀಯ ಆಟೋ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುತ್ತಿರುವ ಜನದಟ್ಟಣೆಯಿಂದಾಗಿ ಆಟೋ ಚಾಲಕರು ನಗರದ ಹಲವು ಕಡೆ ಆಟೋ ನಿಲುಗಡೆ ಮಾಡಲು ಸ್ಟಾö್ಯಂಡ್ ಇಲ್ಲದೇ ಇರುವುದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಪ್ರಯಾಣಿಕರೂ ತೊಂದರೆಯಾಗುತ್ತಿದೆ. ಹಾಗಾಗಿ ನಗರದ ಕುಷ್ಟಗಿ ಮಾರ್ಗದ ಬಸವ ವೃತ್ತ, ಬಸ್ ನಿಲ್ದಾಣದ ಬಳಿಯಿರುವ ಸಹನಾ ಆಸ್ಪತ್ರೆಗೆ ಹೋಗುವ ಮಾರ್ಗದ ರಸ್ತೆಯಲ್ಲಿ ಆಟೋ ಸ್ಟಾö್ಯಂಡ್‌ಗೆ ಅನುಕೂಲ ಕಲ್ಪಿಸಿ ನಾಮಫಲಕ ಅಳವಡಿಸಬೇಕು ಹಾಗೂ ನಗರದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ನಗರಸಭೆ ಜಾಗೆಯಲ್ಲಿ ಆಟೋ ಸ್ಟ್ಯಾಂಡ್‌ಗೆ ಅವಕಾಶ ಒದಗಿಸಿ, ಗ್ರಿಲ್ ವ್ಯವಸ್ಥೆ ಮಾಡುವ ಮೂಲಕ ಸರದಿಯಲ್ಲಿ ಆಟೋ ನಿಲ್ಲಲು ಅನುಕೂಲ ಮಾಡಿಕೊಡಬೇಕು ಎಂದು ಸಂಘದಿಂದ ಮನವಿ ಮಾಡಿದ್ದಾರೆ.

‘ಮೂತ್ರಾಲಯ ನಿರ್ಮಿಸಿ’
ಸುಕಾಲಪೇಟೆ ರಸ್ತೆ ಮಾರ್ಗದಲ್ಲಿ ಒಂದೇ ಒಂದು ಸಾರ್ವಜನಿಕ ಮೂತ್ರಾಲಯ ಅಥವಾ ಶೌಚಾಲಯ ಇರುವುದಿಲ್ಲ. ಇದರಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇನ್ನೂ ಮಂಗಳವಾರ ಸಂತೆಯ ದಿನ ದೇವರಾಜು ಅರಸು ಮಾರುಕಟ್ಟೆ ಹಾಗೂ ಸುಕಾಲಪೇಟೆ ರಸ್ತೆ ಮಾರ್ಗದಲ್ಲಿ ಜನದಟ್ಟಣೆಯಾಗುವುದರಿಂದ ಕನಿಷ್ಠ ಪಕ್ಷ ಮೂತ್ರ ವಿಸರ್ಜನೆ ಮಾಡಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಇದರಿಂದ ಸಂತೆಗೆ ಬರುವ ಮಹಿಳೆಯರು, ಮಹಿಳಾ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಪಶು ಆಸ್ಪತ್ರೆ ಕಾಂಪೌಂಡ್‌ಗೆ ಹೊಂದಿಕೊಂಡು ಇರುವ ರಸ್ತೆ ಬದಿಯ ಚರಂಡಿ, ಮಣ್ಣಿನಿಂದ ಮುಚ್ಚಿಹೋಗಿದ್ದು, ಈ ಚರಂಡಿಯ ಹೂಳನ್ನು ವಿಲೇವಾರಿ ಮಾಡಿ, ದುರಸ್ತಿಗೊಳಿಸಿ, ಈ ಪ್ರದೇಶದಲ್ಲಿ ಸಾರ್ವಜನಿಕ ಮೂತ್ರಾಲಯ ಸೌಲಭ್ಯ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ನಾಗರಾಜ ಪೂಜಾರ್, ಅಧ್ಯಕ್ಷ ಬಸವರಾಜ ಕೊಂಡೆ, ಉಪಾಧ್ಯಕ್ಷ ನಾಗಪ್ಪ ಬಿಂಗಿ, ಕಾರ್ಯದರ್ಶಿ ಶೇಕ್ಷಾವಲಿ, ಖಜಾಂಚಿ ಖಾಜಾಹುಸೇನ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಆಟೋ ಚಾಲಕರು ಇದ್ದರು.
