ನಮ್ಮ ಸಿಂಧನೂರು, ಎಪ್ರಿಲ್ 26
ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಡಹಗಲೇ ನಡೆದ ನೇಹಾ ಹಿರೇಮಠ ಅವರ ಬರ್ಬರ ಕೊಲೆ ಘಟನೆಯನ್ನು ಖಂಡಿಸಿ, ಕೂಡಲೇ ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್ 3ನಲ್ಲಿ, ಯುವತಿಗೆ ಪ್ರೀತಿಸುವಂತೆ ಕಿರುಕುಳ ನೀಡಿ, ಇದನ್ನು ಪ್ರತಿರೋಧಿಸಿದ ಯುವತಿಯ ಪಾಲಕರ ಮೇಲೆ ಹಲ್ಲೆ ಮಾಡಿರುವ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಅಮ್ಮಾ ಜನಸೇವಾ ಟ್ರಸ್ಟ್ ವತಿಯಿಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ರವಾನಿಸಲಾಯಿತು.
ನೇಹಾ ಹತ್ಯೆ ಘಟನೆಯಿಂದ ವಿದ್ಯಾರ್ಥಿ ಪಾಲಕರು ಹಾಗೂ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಮೂಡಿದೆ. ವಿದ್ಯಾ ಕೇಂದ್ರಗಳಾದ ಕಾಲೇಜ್ ಕ್ಯಾಂಪಸ್‌ಗಳು ಇಂದು ರಣಾಂಗಣವಾಗುತ್ತಿದ್ದು, ಈ ಕೂಡಲೇ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಅಲ್ಲದೇ ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್.3ರಲ್ಲಿ ಯುವಕನೊಬ್ಬ, ಯುವತಿ ಪ್ರೀತಿ ಮಾಡಲು ನಿರಾಕರಿಸಿದ ಕಾರಣಕ್ಕೆ ಯುವತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಆಕೆಯ ತಂದೆ ಮತ್ತು ತಾಯಿಯ ಮೇಲೆ ಹಲ್ಲೆ ಮಾಡಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಕೂಡಲೇ ತಪ್ಪಿತಸ್ಥ ಯುವಕನನ್ನು ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕು ಎಂದು ಟ್ರಸ್ಟ್ನವರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷೆ ಮಹಾನಂದಿ, ಗೌರವ ಅಧ್ಯಕ್ಷೆ ಹಂಪಮ್ಮ, ಸದಸ್ಯರಾದ ಚಾಮುಂಡೇಶ್ವರಿ, ಅನ್ನಪೂರ್ಣಮ್ಮ, ಗಿರಿಜಮ್ಮ, ಆಯೇಶಾ ಬೇಗಂ, ಕರ್ನಾಟಕ ಜನಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಯೇಸಪ್ಪ, ಹುಸೇನಬಿ ಸರಸ್ವತಿ ಇನ್ನಿತರರಿದ್ದರು.