ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 17
ಸಿಂಧನೂರಿನ ಕುಷ್ಟಗಿ ಮಾರ್ಗದಲ್ಲಿರುವ ಸರಕಾರಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಪಿಡಿಒ ಪರೀಕ್ಷೆಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಹುತೇಕ ಪರೀಕ್ಷಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿ, ಕುಷ್ಟಗಿ-ಸಿಂಧನೂರು ಹೆದ್ದಾರಿಯಲ್ಲಿ 17-11-2024 ಭಾನುವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಈ ಕೇಂದ್ರದ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದರೆ, ಇನ್ನೂ ಕೆಲ ಪರೀಕ್ಷಾರ್ಥಿಗಳು ಪರೀಕ್ಷೆ ಬರೆದಿದ್ದು ಕಂಡುಬಂತು.
“ಪರೀಕ್ಷಾ ಸಮಯಕ್ಕೆ ಆಯಾ ಹಾಲ್‌ನಲ್ಲಿದ್ದ ಪರೀಕ್ಷಾರ್ಥಿಗಳಿಗೆ ಸರಿಯಾಗಿ ಪ್ರಶ್ನೆಪತ್ರಿಕೆಗಳನ್ನು ಹಂಚಿಲ್ಲ, ಕೆಲವರಿಗೆ ತಡವಾಗಿ ಹಂಚಲಾಗಿದೆ, ಇನ್ನೂ ಕೆಲ ಕೊಠಡಿಗಳಿಗೆ ಕಡಿಮೆ ಪ್ರಶ್ನೆ ಪತ್ರಿಕೆಗಳು ವಿತರಣೆಯಾಗಿವೆ, ಪರೀಕ್ಷಾ ವೇಳೆಗೆ ನಮಗೆ ಪ್ರಶ್ನೆ ಪತ್ರಿಕೆ ವಿತರಿಸಲು ಕೇಳಿದರೆ ಮೇಲ್ವಿಚಾರಕರು ಸ್ವಲ್ಪ ತಡೆಯಿರಿ ಎಂದು ಹೇಳುತ್ತಿದ್ದಾರೆ. ಹೀಗಾದರೆ ಹೇಗೆ ? ಈ ಪರೀಕ್ಷೆಯಲ್ಲಿ ಏನೋ ನಡೆಯುತ್ತಿದೆ” ಎಂದು ಪರೀಕ್ಷಾ ಕೇಂದ್ರದಿಂದ ಹೊರಬಂದ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳು ಹೀಗೆಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದರು.
ಉದ್ರಿಕ್ರ ವಾತಾವರಣ
ಹೆದ್ದಾರಿಯಲ್ಲಿ ಕುಳಿತ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆಲವೊತ್ತು ಉದ್ರಿಕ್ತ ವಾತಾವರಣ ಕಂಡುಬಂತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪರೀಕ್ಷಾರ್ಥಿಗಳು ಹೆದ್ದಾರಿಯಲ್ಲಿ ದಿಢೀರ್ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರಿಂದ, ಈ ಮಾರ್ಗದಲ್ಲಿ ಕೆಲವೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪರೀಕ್ಷಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ಹೆಣಗಾಡಬೇಕಾಯಿತು.
ತಹಸೀಲ್ದಾರ್, ಡಿವೈಎಸ್‌ಪಿ, ಪಿಐ ಸೇರಿದಂತೆ ಮಹಿಳಾ ಪೊಲೀಸ್ ಸಿಬ್ಬಂದಿ ಪರೀಕ್ಷಾರ್ಥಿಗಳನ್ನು ಮನವೊಲಿಸಲು ಯತ್ನಿಸಿದರೂ ಫಲಪ್ರದವಾಗಲಿಲ್ಲ. ಕೆಲವರು ಪರೀಕ್ಷೆ ಬರೆದರೆ, ಅರ್ಧದಷ್ಟು ಪರೀಕ್ಷಾರ್ಥಿಗಳು ಪರೀಕ್ಷ ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾಗಿದ್ದು, ಕಂಡುಬಂತು. ಈ ಬಗ್ಗೆ ತನಿಖೆ ನಡೆದ ನಂತರವೇ ಏನಾದರೂ ಅಕ್ರಮ ನಡೆದಿದ್ದರೆ ಬಯಲಿಗೆ ಬರಲಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ಬಹಿಷ್ಕರಿಸಿದ ಪರೀಕ್ಷಾರ್ಥಿಯೊಬ್ಬರ ವಿಡಿಯೋ ವೈರಲ್
ಸರಕಾರಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬಹಿಷ್ಕರಿಸಿ, ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿರುವ ಪರೀಕ್ಷಾರ್ಥಿಯೊಬ್ಬರು ಮಾತನಾಡಿದ ವಿಡಿಯೋ ವೈರಲ್ ಆಗಿದ್ದು, ಪರೀಕ್ಷಾರ್ಥಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಕೆಲವೊತ್ತು ಕುಷ್ಟಗಿ-ಸಿಂಧನೂರು ಮಾರ್ಗದ ಸಂಚಾರ ಸ್ಥಗಿತ
ಸರ್ಕಾರಿ ಮಹಾವಿದ್ಯಾಲಯದ ಮುಂದೆ ಸಾವಿರಾರು ನೂರಾರು ವಿದ್ಯಾರ್ಥಿಗಳು ರಸ್ತೆ ಮೇಲೆ ಕುಳಿತು ದಿಢೀರ್ ಪ್ರತಿಭಟನೆಗೆ ಮುಂದಾಗಿದ್ದಾರಿಂದ ವಾಹನ ಸಂಚಾರ ಕೆಲವೊತ್ತು ಸ್ಥಗಿತಗೊಂಡಿತು. ಪೊಲೀಸ್ ಸಿಬ್ಬಂದಿ ಪರೀಕ್ಷಾರ್ಥಿಗಳನ್ನು ಮನವೊಲಿಸಲು ಯತ್ನಿಸಿದರೂ ಅವರು ಪಟ್ಟು ಸಡಿಲಸಲಿಲ್ಲ.
ತನಿಖೆ ನಂತರ ಬಯಲಿಗೆ
ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಪಿಡಿಒ ಸಾಮಾನ್ಯ ಜ್ಞಾನ (ಜಿಕೆ) ಪರೀಕ್ಷೆ ನಡೆದಿದ್ದು, ಆದರೆ ಸರ್ಕಾರಿ ಮಹಾವಿದ್ಯಾಲಯದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿ, ಪ್ರತಿಭಟನೆ ನಡೆಸಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆಗೆ ನಡೆದು ಏನು ಲೋಪವಾಗಿದೆ ಎಂದು ಪತ್ತೆಹಚ್ಚಿದರೆ ಆಗ ಅಕ್ರಮ ಬಯಲಿಗೆ ಬರಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.