ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 4
ಆರ್‌ಎಸ್‌ಎಸ್, ಭಾರತ ಬಹು ಸಾಂಸ್ಕೃತಿಕ, ಜಾತ್ಯತೀತ ರಾಷ್ಟ್ರ ಎಂಬುದನ್ನು ಅಲ್ಲಗಳೆದು, ಹಿಂದೂ ರಾಷ್ಟ್ರ ಕಟ್ಟಲು ಹೊರಟಿದ್ದು, ಬ್ರಾಹ್ಮಣವಾದ ಹಾಗೂ ಬಂಡವಾಳವಾದವನ್ನು ಬುನಾದಿ ಮಾಡಿಕೊಂಡು, ಪ್ರಜಾಪ್ರಭುತ್ವ, ಸಮಾನತೆ, ಸಹೋದರತೆ ಹಾಗೂ ಸಹ ಬಾಳ್ವೆಯ ಮೌಲ್ಯಗಳ ದಾಳಿ ಮಾಡುತ್ತಿರುವುದನ್ನು ಪ್ರತಿರೋಧಿಸಲು, ಹೈದ್ರಾಬಾದ್‌ನಲ್ಲಿ ಡಿಸೆಂಬರ್ 6ರಂದು ಅಖಿಲ ಭಾರತ ಫ್ಯಾಸಿಸ್ಟ್ ವಿರೋಧಿ ಸಮಾವೇಶ ಸಂಘಟಿಸಲಾಗಿದೆ ಎಂದು ಸಿಪಿಐ(ಎಂಎಲ್)ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ. ಗಂಗಾಧರ್ ಹಾಗೂ ಜಿಲ್ಲಾ ಸಮಿತಿ ಸದಸ್ಯ ಹೆಚ್.ಆರ್.ಹೊಸಮನಿ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಆರ್‌ಎಸ್‌ಎಸ್ ದಲಿತರು, ಮಹಿಳೆಯರು ಮನುಷ್ಯರೇ ಅಲ್ಲ ; ಮುಸಲ್ಮಾನರು ಈ ದೇಶದವರೇ ಅಲ್ಲ ; ಕ್ರೈಸ್ತ, ಬೌದ್ಧ, ಜೈನ ಧರ್ಮಗಳಿಗೆ ಭಾರತದಲ್ಲಿ ಜಾಗವೇ ಇಲ್ಲ ಎಂದು, ಪ್ರಭುತ್ವಾಧಿಕಾರದ ಮೂಲಕ ಹಿಂದೂ ರಾಷ್ಟ್ರವನ್ನು ಹೇರುತ್ತಿದೆ. ದೇಶದ ಭೂಮಿ, ಅರಣ್ಯ, ಜಲಸಂಪನ್ಮೂಲಗಳು ಹಾಗೂ ವಾಣಿಜ್ಯ ವ್ಯಾಪಾರಗಳನ್ನು ಅದಾನಿ, ಅಂಬಾನಿ ಸೇರಿ ಕಾರ್ಪೊರೇಟ್ ಬಂಡವಾಳ ಶಾಹಿಗಳಿಗೆ ಬಲಿ ಕೊಡಲಾಗುತ್ತಿದೆ. ಫ್ಯಾಸಿಸಂ ಹರಡುತ್ತಿರುವ ಈ ಅಪಾಯಕಾರಿ ಸಂದರ್ಭದಲ್ಲಿ ದೇಶ ಹಾಗೂ ಜನರನ್ನು ನಾವೇ ಸಂರಕ್ಷಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಬಾಬ್ರಿ ಮಸೀದಿ ವಿದ್ವಂಸಗೊಳಿಸಿದ ದಿನ ಹಾಗೂ ಬಾಬಾ ಸಾಹೇಬರು ಪರಿ ನಿರ್ವಾಣವಾದ ದಿನವಾದ ಡಿಸೆಂಬರ್ 6, 2025 ರಂದು ಹೈದರಾಬಾದ್‌ನಲ್ಲಿ ಅಖಿಲ ಭಾರತ ಫ್ಯಾಸಿಸ್ಟ್ ವಿರೋಧಿ ಸಮಾವೇಶ ಆಯೋಜಿಸಲಾಗಿದೆ” ಎಂದು ಹೇಳಿದ್ದಾರೆ.
29 ಸಂಘಟನೆಗಳು, 14 ರಾಜ್ಯಗಳ ಪ್ರತಿನಿಧಿಗಳು ಭಾಗಿ
“ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ವಿ.ಗೋಪಾಲ್‌ಗೌಡ ಸಮಾವೇಶವನ್ನು ಉದ್ಘಾಟನೆ ಮಾಡಿ ಮಾತನಾಡಲಿದ್ದಾರೆ. ಸಿಪಿಐ(ಎಂಎಲ್)ರೆಡ್‌ಸ್ಟಾರ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ.ಜೆ.ಜೆಮ್ಸ್ ಮುಖ್ಯ ಭಾಷಣ ಮಾಡಲಿದ್ದಾರೆ. ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಭಾಗವಹಿಸುವರು. ವಿವಿಧ ಪಕ್ಷ ಹಾಗೂ ಸಂಘಗಳು ಸೇರಿ ಒಟ್ಟು 29 ಸಂಘಟನೆಗಳ ಸಂಯುಕ್ತ ವೇದಿಕೆ ಅಡಿ ಈ ಸಮಾವೇಶವನ್ನು ನಡೆಸಲಾಗುತ್ತಿದೆ. 14 ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಹಾಗಾಗಿ, ಕರ್ನಾಟಕ ರಾಜ್ಯ ಮತ್ತು ರಾಯಚೂರು ಜಿಲ್ಲೆಯ ಎಲ್ಲಾ ದಮನಿತ ಸಮುದಾಯದ, ದುಡಿಯುವ ವರ್ಗದ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು” ಅವರು ಮನವಿ ಮಾಡಿದ್ದಾರೆ.
