ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 26
ಕೇಂದ್ರ ಸರ್ಕಾರ ಜಾರಿಗೆ ತಂದ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ದಿನಾಂಕ:
12-02-2026ರಂದು ಜೆಸಿಟಿಯು ಕರೆ ನೀಡಿರುವ ರಾಷ್ಟ್ರೀಯ ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಭಾಷುಮಿಯಾ ಅವರು ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಷ್ಟ್ರೀಯ ಮುಷ್ಕರವನ್ನು ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಸೋಮವಾರ ಸಿಂಧನೂರಿನಲ್ಲಿ ಸಭೆ ನಡೆಸಲಾಗಿದೆ. ಜ.28 ರಾಯಚೂರು, ಜ.29 ಮಾನ್ವಿ, ಜ.31 ಲಿಂಗಸುಗೂರು-ಹಟ್ಟಿ ಚಿನ್ನದಗಣಿಯಲ್ಲಿ ಸಭೆ ಆಯೋಜಿಸಲಾಗಿದೆ. ರಾಷ್ಟ್ರೀಯ ಮುಷ್ಕರದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಹಮಾಲರು, ಸಂಘಟಿತ ಕಾರ್ಮಿಕರು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಜಿಲ್ಲೆಯ ಎಲ್ಲಾ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಔದ್ಯೋಗಿಕ ಸುರಕ್ಷತೆ, ಅರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ, 2020, ಕೈಗಾರಿಕಾ ಸಂಬAಧ ಸಂಹಿತೆ, 2020, ವೇತನ ಸಂಹಿತೆ, 2019 ಹಾಗೂ ಸಾಮಾಜಿಕ ಭದ್ರತೆ ಸಂಹಿತೆ, 2020 ಕಾರ್ಮಿಕ ವಿರೋಧಿಯಾಗಿವೆ. ಕಳೆದ ಡಿಸೆಂಬರ್‌ನಲ್ಲಿ ಜಾರಿಗೆ ತಂದ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ್ ಆಂಡ್ ಅಜೀವಿಕಾ ಮಿಶನ್ (ಗ್ರಾಮೀಣ) ಅಥವಾ (ವಿಬಿ-ಗ್ರಾಮ್‌ಜಿ) 2025’ ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ. ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಮುಷ್ಕರದ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ಭಾಷುಮಿಯಾ ಅವರು ತಿಳಿಸಿದ್ದಾರೆ.
