ಸಿಂಧನೂರು: ಅನರ್ಹರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡಿದರ ಉಗ್ರ ಹೋರಾಟ: ಒಕ್ಕೂಟ ಎಚ್ಚರಿಕೆ

Spread the love

ಲೋಕಲ್ ನ್ಯೂಸ್: ಬಸವರಾಜ.ಎಚ್
ನಮ್ಮ ಸಿಂಧನೂರು, ಜೂನ್ 12

ಅನರ್ಹರಿಗೆ ತಹಸಿಲ್ ಕಾರ್ಯಾಲಯದಿಂದ ಬೇಡ ಜಂಗಮ ಪ್ರಮಾಣ ಪತ್ರ ನೀಡಿದ್ದೇ ಆದಲ್ಲಿ, ಜಿಲ್ಲಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಗುರುವಾರ ತಹಸೀಲ್ದಾರ್ ಅವರಿಗೆ ಎಚ್ಚರಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರ ಹಟ್ಟಿ ಅವರಿಗೆ ಆಕ್ಷೇಪಣೆ ಸಲ್ಲಿಸಿ ಮಾತನಾಡಿದ ಒಕ್ಕೂಟದ ಮುಖಂಡರು, “ಸಿಂಧನೂರಿನ ಪಟೇಲ್ ವಾಡಿಯ ರವಿ ಹಿರೇಮಠ ಎಂಬುವವರು ಬೇಡ ಜಂಗಮ (ಪರಿಶಿಷ್ಟ ಜಾತಿ) ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದು ಕಾನೂನುಬಾಹಿರವಾಗಿರುತ್ತದೆ. ಈ ಅರ್ಜಿಯನ್ನು ವಜಾಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇಂತಹ ತಪ್ಪುಗಳು ಪದೇ ಪದೆ ಮರುಕಳಿಸದಂತೆ ಎಚ್ಚರ ವಹಿಸಬೇಕು” ಎಂದು ಗಮನ ಸೆಳೆದರು.
“ಅರ್ಜಿಯನ್ನು ವಜಾಗೊಳಿಸಿ”
ಬೇಡ ಜಂಗಮ ಸಮುದಾಯದ ಮುಖಂಡರೊಬ್ಬರು ಮಾತನಾಡಿ, “ನಮ್ಮ ಸಮುದಾಯದಲ್ಲಿ ಇಂದಿಗೂ ಶೇ.98ಕ್ಕೂ ಹೆಚ್ಚು ಜನರು ಅನಕ್ಷರಸ್ಥರಾಗಿದ್ದಾರೆ. ವಸತಿ ಸೌಲಭ್ಯ ಇಲ್ಲದೇ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದೇವೆ. ಅಸ್ಪೃಶ್ಯರಾಗಿರುವ ನಾವು ಸಾಮಾಜಿಕವಾಗಿ, ಆರ್ಥಿಕವಾಗಿ ಅತ್ಯಂತ ಕೆಳಸ್ತರದಲ್ಲಿದ್ದೇವೆ. ಇಂದಿಗೂ ನಮ್ಮ ಸಮುದಾಯದಲ್ಲಿ ಪ್ರಾಣಿಗಳ ಹಸಿಮಾಂಸ ತಿನ್ನುವಂತಹ ಪದ್ಧತಿ ಇದೆ. ಇದ್ಯಾವುದರ ಬಗ್ಗೆ ಗೊತ್ತಿರದ, ಸಮಾಜದಲ್ಲಿ ವಿಶೇಷ ಗೌರವ, ಮರ್ಯಾದೆಯನ್ನು ಹೊಂದಿ, ಪುರೋಹಿತರಾಗಿರುವವರೇ, ಅಂಬೇಡ್ಕರ್ ಮಹಾನುಭಾವರು ನಮಗೆ ಕೊಟ್ಟಿರುವ ಹಕ್ಕನ್ನು ಕಿತ್ತುಕೊಳ್ಳಲು ಹೊರಟರೇ ಹೇಗೆ ? ಇದು ನ್ಯಾಯವೇ ? ಇದಕ್ಕೆ ಅಧಿಕಾರಿಗಳು ಯಾವುದೇ ರೀತಿ ಸಹಕರಿಸದೇ ಕೂಡಲೇ ಅರ್ಜಿಯನ್ನು ವಜಾಗೊಳಿಸಬೇಕು. ಆ ಮೂಲಕ ನಮ್ಮ ಸಂವಿಧಾನಬದ್ಧ ಹಕ್ಕನ್ನು ರಕ್ಷಿಸಬೇಕು” ಎಂದು ಆಗ್ರಹಿಸಿದರು.‌

Namma Sindhanuru Click For Breaking & Local News

‘ಅಧಿಕಾರಿಗಳ ಬೇಜವಾಬ್ದಾರಿಯೇ ಸಮಸ್ಯೆ ಉದ್ಬವಿಸಲು ಕಾರಣ’
ತಹಸೀಲ್ ಕಾರ್ಯಾಲಯದ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳು ಮಾಡಿದ ಪ್ರಮಾದದಿಂದ ಸಮಸ್ಯೆ ಉದ್ಭವಿಸಿದೆ. ಅರ್ಜಿ ಸ್ವೀಕರಿಸುವ ಮುನ್ನ ಪೂರಕ ದಾಖಲೆಗಳನ್ನು ಪರಿಶೀಲನೆ ನಡೆಸದೇ, ಸರಿಯಾದ ರೀತಿಯಲ್ಲಿ ಸ್ಥಳ ಪಂಚನಾಮ ನಡೆಸದೇ ಬೇಜವಾಬ್ದಾರಿ ವಹಿಸಲಾಗಿದೆ. ಸಮಾಜದಲ್ಲಿ ಗೌರವ ಸ್ಥಾನದಲ್ಲಿದ್ದು, ಎಲ್ಲ ರೀತಿಯ ಅಧಿಕಾರ, ಅಂತಸ್ತುಗಳನ್ನು ಅನುಭವಿಸುತ್ತಿರುವವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಟ್ಟರೆ ಹೇಗೆ ? ಈ ಪ್ರಕರಣದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಎಸ್ಸಿ ಪ್ರಮಾಣ ಪತ್ರ ಪಡೆಯಲು ಮುಂದಾಗಿರುವವರ ಮೇಲೆ ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಅಲ್ಲದೇ ಇಂತಹ ತಪ್ಪುಗಳು ಮರುಕಳಿಸದಂತೆ ಕ್ರಮ ಜರುಗಿಸಬೇಕು ಎಂದು ವಕೀಲ ಶೇಖರಪ್ಪ ಧುಮತಿ ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು.
“ಮೀಸಲಾತಿ ಕಬಳಿಸುವ ಹುನ್ನಾರ”
ಸಿಂಧನೂರು ತಾಲೂಕಿನಲ್ಲಿ ಕೆಲವರು ಮೀಸಲಾತಿ ಕಬಳಿಸಲು ಹಲವು ವರ್ಷಗಳಿಂದ ವ್ಯವಸ್ಥಿತವಾಗಿ ಹುನ್ನಾರ ನಡೆಸುತ್ತಿದ್ದಾರೆ. ಸುಳ್ಳು ದಾಖಲೆಗಳ ಮೂಲಕ, ಅಂತೆ-ಕಂತೆ ಕಥೆ ಕಟ್ಟಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಇವರಿಗೆ ಹಲವರ ಪರೋಕ್ಷ ಬೆಂಬಲವೂ ಇದೆ. ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದೇ ಹೋದಲ್ಲಿ ಜಿಲ್ಲಾದ್ಯಂತ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಲಾಗುವುದು ಎಂದು ಸಂಘಟನೆಯ ಯುವ ಮುಖಂಡ ಅಮರೇಶ ಗಿರಿಜಾಲಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮರಿಯಪ್ಪ, ಅಲ್ಲಮಪ್ರಭು, ಆರ್.ಆಂಬ್ರೂಸ್, ಶಿವರಾಜ ಬಾಗಲವಾಡ, ಗುರುರಾಜ ಮುಕ್ಕುಂದಾ, ಬಸವರಾಜ ಸಿಂಧನೂರು, ಪರಮೇಶ್ವರಪ್ಪ ವಕೀಲರು, ಹನುಮೇಶ, ಗಂಗಪ್ಪ, ಹನುಮಂತ ಗೋಮರ್ಸಿ, ನರಸಪ್ಪ ಕಟ್ಟಿಮನಿ, ಯಮನಪ್ಪ ಬಿಎಸ್‌ಎನ್‌ಎಲ್, ಅಯ್ಯಪ್ಪ ವಕೀಲರು, ಹನುಮಂತಪ್ಪ ಸಂಗಮೇಶ, ಬಸವರಾಜ ಎಕ್ಕಿ, ವೀರೇಶ ಹೊಸಳ್ಳಿ, ಬಿ.ಎನ್.ಯರದಿಹಾಳ, ಉಮೇಶ ಬಾಲಿ, ನಾಗರಾಜ ಸಾಲಗುಂದಾ, ಬಿ.ಮುತ್ತು, ಯಮನಪ್ಪ, ಹೆಚ್.ಸೂಲಂಗಿ, ಹೊನ್ನೂರು ಕಟ್ಟಿಮನಿ, ಭೀಮೇಶ ಕವಿತಾಳ, ಹೊನ್ನೂರು ಕಟ್ಟಿಮನಿ, ಸಿ.ಮೌನೇಶ ದೊರೆ, ಸುರೇಶ ಕಟ್ಟಿಮನಿ, ಮಹಾದೇವಪ್ಪ ಧುಮತಿ, ಶಾಮಣ್ಣ ಸಿಂಧನೂರು, ನಿರುಪಾದೆಪ್ಪ ವಕೀಲರು, ಮಹಾಂಕಾಳಪ್ಪ, ದುರುಗೇಶ ಬಾಲಿ ಸೇರಿದಂತೆ ಇನ್ನಿತರರು ಇದ್ದರು.


Spread the love

Leave a Reply

Your email address will not be published. Required fields are marked *