(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 21
ಲಿಂಗಸುಗೂರಿನಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ 10ಕ್ಕೂ ಹೆಚ್ಚು ಕೋಚಿಂಗ್ ಸೆಂಟರ್‌ಗಳ ಮೇಲೆ ಸಹಾಯಕ ಆಯುಕ್ತ ಶಿಂಧೆ ಅವಿನಾಶ್ ಸಂಜೀವನ್ ಅವರು ದಿಢೀರ್ ದಾಳಿ ನಡೆಸಿ, ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡುವಂತೆ ಖಡಕ್ ಸೂಚನೆ ನೀಡಿ, ಒಂದು ವೇಳೆ ನಿಯಮ ಉಲ್ಲಂಘಿಸಿ ನಡೆಸಿದ್ದೇ ಆದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿಯೂ ಸಂಚಲನ ಶುರುವಾಗಿದೆ ಎಂದು ಹೇಳಲಾಗುತ್ತಿದೆ.
ಸಿಂಧನೂರು ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ, ಲಿಂಗಸುಗೂರು ಪಟ್ಟಣಕ್ಕಿಂತಲೂ ಹೆಚ್ಚು ಅನಧಿಕೃತ ಕೋಚಿಂಗ್ ಸೆಂಟರ್‌ಗಳು ಇದ್ದು, ಕೋಚಿಂಗ್ ನೆಪದಲ್ಲಿ ವಿದ್ಯಾರ್ಥಿ ಪಾಲಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. 16 ವರ್ಷದ ಒಳಗಿನ ಮಕ್ಕಳಿಗೆ ಊಟ, ವಸತಿಯುತ ಕೋಚಿಂಗ್‌ಗೆ 10 ಸಾವಿರಕ್ಕಿಂತಲೂ ಹೆಚ್ಚು ಹಣ ಹಾಗೂ ಕೇವಲ ಕೋಚಿಂಗ್‌ಗಷ್ಟೇ ತಲಾ ವಿದ್ಯಾರ್ಥಿಗೆ ಆರೇಳು ಸಾವಿರ ರೂಪಾಯಿ ಪಡೆಯಲಾಗಿದೆ. ಕೆಲವೊಂದು ಕೋಚಿಂಗ್ ಸೆಂಟರ್‌ಗಳಲ್ಲಿ 200ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋಚಿಂಗ್ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿ ಪಾಲಕರು ಸೇರಿದಂತೆ ಕೆಲ ಸಂಘಟನೆಯವರು ಸಂಬಂಧಿಸಿದ ಇಲಾಖೆಯವರಿಗೆ ದೂರು ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
“ಸಿಂಧನೂರು ತಾಲೂಕಿನಲ್ಲಿಯೂ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಕ್ರಮವಾಗಲಿ”
“ಶಿಕ್ಷಣದ ಹೆಸರಿನಲ್ಲಿ ಕೆಲವರು ಸಂಪೂರ್ಣ ವ್ಯಾಪಾರೀಕರಣಕ್ಕೆ ನಿಂತಿದ್ದಾರೆ. ಬೇಸಿಗೆ ರಜೆ ಬಂದರೆ ಸಾಕು ಆ ವೆಕೇಶನ್ನು.. ಈ ವೆಕೇಶನ್ನು… ಎಂದು ಹೇಳಿ ಸಿಕ್ಕಾಪಟ್ಟೆ ಪ್ರಚಾರ ಮಾಡಿ, ಪಾಲಕರಿಗೆ ಮಂಕುಬೂದಿ ಎರಚಿ, ಹಣ ವಸೂಲಿ ಮಾಡುವುದು ಎಗ್ಗಿಲ್ಲದೇ ನಡೆದಿದೆ. ಇಡೀ ವರ್ಷಕ್ಕೆ ಕಟ್ಟುವ ಶಾಲಾ ಫೀಜಿನ ಡಬಲ್ ಹಣವನ್ನು ಸಮ್ಮರ್ ವೆಕೇಶನ್‌ನಲ್ಲಿ ನಡೆಯುವ ಕೋಚಿಂಗ್‌ಗಾಗಿ ಪಾಲಕರು ಸುರಿಯುವಂತಾಗಿದೆ. ಬಹಳಷ್ಟು ಕೋಚಿಂಗ್ ಸೆಂಟರ್‌ಗಳು ಅನಧಿಕೃತವಾಗಿ ನಡೆಯುತ್ತಿದ್ದು, ಸಂಬಂಧಿಸಿದ ಇಲಾಖೆಯವರು ಕಣ್ಮುಚ್ಚಿ ಕುಳಿತಿದ್ದಾರೆ. ಶಿಕ್ಷಣದ ಹೆಸರಿನಲ್ಲಿ ಪಾಲಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಮಾನ್ಯ ಎಸಿಯವರು ಲಿಂಗಸುಗೂರಿನಲ್ಲಿ ದಾಳಿ ನಡೆಸಿದಂತೆ, ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿಯೂ ದಾಳಿ ನಡೆಸಿ, ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಣದಾಹಕ್ಕೆ ಕಡಿವಾಣ ಹಾಕಬೇಕಿದೆ. ಆ ಮೂಲಕ ವಿದ್ಯಾರ್ಥಿ ಪಾಲಕರಿಗೆ ನ್ಯಾಯ ಒದಗಿಸಬೇಕಿದೆ” ಎಂದು ವಿದ್ಯಾರ್ಥಿ ಪಾಲಕರೊಬ್ಬರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಏನು ಹೇಳುತ್ತದೆ
ಕೋಚಿಂಗ್ ಸೆಂಟರ್‌ಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ವಯಸ್ಸು 16 ವರ್ಷಕ್ಕಿಂತ ಕಡಿಮೆ ಇರಬಾರದು. ದಾರಿ ತಪ್ಪಿಸುವಂತಹ ಸುಳ್ಳು ಭರವಸೆಗಳನ್ನು ಕೋಚಿಂಗ್ ಸೆಂಟರ್‌ಗಳು ನೀಡುವಂತಿಲ್ಲ ಹಾಗೂ ರ‍್ಯಾಂಕ್ ಅಥವಾ ಹೆಚ್ಚು ಅಂಕಗಳ ಗ್ಯಾರೆಂಟಿ ನೀಡುವಂತಿಲ್ಲ ಸೇರಿದಂತೆ ಹಲವು ಷರತ್ತುಗಳು ಇರುವ ಹೊಸ ಮಾರ್ಗಸೂಚಿಯನ್ನು ಕೇಂದ್ರದ ಸರ್ಕಾರದ ಶಿಕ್ಷಣ ಮಂತ್ರಾಲಯವು 2024 ಜನವರಿಯಲ್ಲಿ ಬಿಡುಗಡೆ ಮಾಡಿದೆ. ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರುಗಳನ್ನು ಪರಿಗಣಿಸಿ ಸಚಿವಾಲಯವು, ಖಾಸಗಿ ಕೋಚಿಂಗ್ ಕೇಂದ್ರಗಳ ಅನಿಯಂತ್ರಿತ ಬೆಳವಣಿಗೆಗೆ ಕಡಿವಾಣ ಹಾಗೂ ಇವುಗಳ ನಿಯಂತ್ರಣಕ್ಕೆ ಚೌಕಟ್ಟು ರಚಿಸುವ ಸದುದ್ದೇಶದಿಂದ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. 16 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಕೋಚಿಂಗ್‌ಗೆ ದಾಖಲಿಸಿಕೊಳ್ಳುವಂತಿಲ್ಲ, ಪ್ರೌಢಶಾಲೆ ಪರೀಕ್ಷೆ ನಂತರವೇ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬೇಕು. ವಿವಿಧ ಕೋರ್ಸ್ಗಳಿಗೆ ವಿಧಿಸುವ ಬೋಧನಾ ಶುಲ್ಕ ನ್ಯಾಯೋಚಿತ ಮತ್ತು ಸಮಂಜಸವಾಗಿರಬೇಕು, ಈ ಶುಲ್ಕಕ್ಕೆ ಸರಿಯಾದ ರಸೀದಿಗಳನ್ನು ನೀಡಬೇಕು, ಕೋಚಿಂಗ್ ಕೇಂದ್ರಗಳ ಚಟುವಟಿಕೆಗಳ ಮೇಲೆ ನಿಗಾ, ಮೇಲ್ವಿಚಾರಣೆ, ನೋಂದಣಿಯ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳದ್ದು ಎಂದು ಈ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದ್ದು, ಅಲ್ಲದೇ ಇನ್ನೂ ಹಲವು ನಿಯಮಗಳು, ಮಾರ್ಗಸೂಚಿಗಳು ಅದರಲ್ಲಿವೆ.