ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 19
ನಗರದ ತಹಶಿಲ್ ಕಾರ್ಯಾಲಯದ ಆವರಣದಲ್ಲಿರುವ ಆಧಾರ್ ಕಾರ್ಡ್ ಕೇಂದ್ರವನ್ನು ತಾಂತ್ರಿಕ ಕಾರಣದಿಂದ ಶನಿವಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಆಧಾರ್ ಕಾರ್ಡ್ ಕೇಂದ್ರದ ಮುಂದೆ ಯಾವುದೇ ರೀತಿಯ ಸೂಚನೆ ಅಂಟಿಸದೇ ಇರುವುದರಿಂದ ಬೆಳಿಗ್ಗೆಯೇ ಬೇರೆ ಬೇರೆ ಗ್ರಾಮ ಹಾಗೂ ನಗರದ ವಿವಿಧ ವಾರ್ಡ್ಗಳಿಂದ ಬಂದಿದ್ದ ಸಾರ್ವಜನಿಕರು ಕಾದು ಕಾದು ಸುಸ್ತಾದರು. ಇನ್ನು ವೃದ್ಧರು, ವಿಕಲಚೇತನರು, ತ್ರಾಸು ಅನುಭವಿಸಿ ಮನೆಗೆ ನಡೆದರು.
ನಮ್ಮ ಕರ್ನಾಟಕ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ ಸೇರಿದಂತೆ ಮಾಧ್ಯಮದವರು ತಹಸೀಲ್ದಾರ್ ಅವರ ಗಮನ ಸೆಳೆದಾಗ ತಾಂತ್ರಿಕ ಸಮಸ್ಯೆಯ ಕಾರಣ ಆಧಾರ್ ಕೇಂದ್ರ ಬಂದ್ ಆಗಿರುವ ಕುರಿತು ಮಾಹಿತಿ ತಿಳಿದುಬಂತು. ಕೇಂದ್ರ ಬಂದ್ ಆಗಿರುವ ಬಗ್ಗೆ ಯಾವುದೇ ಮುನ್ಸೂಚನೆ ನೀಡದೇ ವಿನಾಃಕಾರಣ ಜನರನ್ನು ಕಾಯಿಸುತ್ತಿರುವ ಸಿಬ್ಬಂದಿಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಶಿಥಿಲಗೊಂಡ ಕಟ್ಟಡದಲ್ಲಿ ಆಧಾರ್ ಕೇಂದ್ರ !
ಛಾವಣಿ ಶಿಥಿಲಗೊಂಡ ಕಾರಣ ಆಹಾರ ಇಲಾಖೆಯನ್ನು ತಹಸಿಲ್ ಕಾರ್ಯಾಲಯದ ಮೇಲ್ಮಡಿಯ ಕೊಠಡಿಯೊಂದಕ್ಕೆ ಸ್ಥಳಾಂತರಿಸಲಾಗಿದ್ದು, ಆದರೆ ವಿಪರ್ಯಾಸವೆನ್ನುವಂತೆ ಇದೇ ಶಿಥಿಲಗೊಂಡ ಕಟ್ಟಡದಲ್ಲಿ ಆಧಾರ್ ಕೇಂದ್ರಕ್ಕೆ ವ್ಯವಸ್ಥೆ ಮಾಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಕೊಠಡಿಯ ಚಾವಣಿ ಶಿಥಿಲಗೊಂಡ ಬಗ್ಗೆ ತಹಸೀಲ್ದಾರ್ ಹಾಗೂ ಸಿಬ್ಬಂದಿಯ ಗಮನ ಸೆಳೆದ ನಂತರ “ಇಲ್ಲಿ ಇರುವ ಕಟ್ಟಡದ ಛತ್ತು ಶಿಥಿಲಗೊಂಡಿದ್ದು, ಇಲ್ಲಿ ಸಾರ್ವಜನಿಕರು ಕುಳಿತುಕೊಳ್ಳಬಾರದು” ಎಂಬ ಸೂಚನಾ ಭಿತ್ತಿಪತ್ರವನ್ನು ಸಿಬ್ಬಂದಿಗಳು ಕೊಠಡಿಯ ಬಾಗಿಲಿಗೆ ಅಂಟಿಸಿದರು.