ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮಾರ್ಚ್ 20
ಆರಂಭದಿಂದಲೂ ಹಲವು ಆರೋಪಗಳಿಗೆ ಗುರಿಯಾಗಿದ್ದ ಯಲ್ಲಮ್ಮ ಗುಡಿ ಹತ್ತಿರದ ಹಳ್ಳದ ಬ್ರಿಡ್ಜ್, ವಿಧಾನ ಪರಿಷತ್ ಸದಸ್ಯರು ಸದನಲ್ಲಿ ಧ್ವನಿ ಎತ್ತಿದ ನಂತರ ಸಂಪೂರ್ಣ ದುರಸ್ತಿಗೊಳ್ಳಲಿದೆ ಎಂಬ ಸಾರ್ವಜನಿಕರ ಹಾಗೂ ಚಾಲಕರ ನಿರೀಕ್ಷೆ ಹುಸಿಯಾಗಿದೆ. ಬ್ರಿಡ್ಜ್ನ ಎರಡೂ ಬದಿಗಳಲ್ಲಿ ಬಿದ್ದಿರುವ ಕೊರಕಲುಗಳು (ಕುಳಿ) ಸೈಕಲ್ ಮೋಟರ್ ಸವಾರರ ಜೀವ ಬಲಿಗೆ ಕಾದು ಕುಳಿತಿವೆ ಎಂಬುದು ಈ ಮಾರ್ಗದಲ್ಲಿ ದಿನವೂ ಸಂಚರಿಸುವವರ ಆಪಾದನೆಯಾಗಿದೆ.
ಬ್ರಿಡ್ಜ್ ನಿರ್ಮಾಣದ ಹೊಣೆ ಹೊತ್ತಿದ್ದ ಗುತ್ತಿಗೆದಾರರು ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಬ್ರಿಡ್ಜ್ನ ಮೇಲ್ಭಾಗದಲ್ಲಿ ವಾಹನ ಚಾಲಕರ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ರಸ್ತೆ ಸಮತಟ್ಟು ಮಾಡುವುದು ಸೇರಿದಂತೆ ಯಾವುದೇ ರೀತಿಯ ಕೊರಕಲು ಬೀಳದಂತೆ ಡಾಂಬರ್, ಸಿಮೆಂಟ್ ಕಾಂಕ್ರೀಟ್ ಹಾಕದೇ ಮನಸೋಇಚ್ಛೆ ಕೆಲಸ ಕೈಗೊಂಡಿದ್ದು ಸವಾರರ ಜೀವಕ್ಕೆ ಆಪತ್ತು ತಂದಿದೆ.
ಎಮ್ಮೆಲ್ಲೆ, ಎಮ್ಮಲ್ಸಿಯವರ ಸೂಚನೆಗೂ ಬೆಲೆ ಇಲ್ಲ !?
ಎಮ್ಮೆಲ್ಸಿಯವರು ಸದನದಲ್ಲಿ ಧ್ವನಿ ಎತ್ತಿದ ನಂತರ ಕೆಲ ತಿಂಗಳು ಹಿಂದೆ ಸಂಬಂಧಿಸಿದ ಇಲಾಖೆಯವರು ತಗ್ಗು ಪ್ರದೇಶದಲ್ಲಿ ಸಿಮೆಂಟ್ ಕಾಂಕ್ರಿಟ್ ಹಾಕಿ, ಡಾಂಬರ್ ಹಾಕಿ ಕೈತೊಳೆದುಕೊಂಡಿದ್ದಾರೆ. ಆದರೆ ಪುನಃ ಡಾಂಬರ್ ಕಿತ್ತು ಹೋಗುತ್ತಿದ್ದು, ಬ್ರಿಡ್ಜ್ನ ಮೇಲ್ಭಾಗದ ಎರಡೂ ಬದಿಗಳಲ್ಲಿ ಕೊರಕಲು ಬಿದ್ದಿವೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಚುನಾಯಿತ ಪ್ರತಿನಿಧಿಗಳು ಹಾಗೂ ಮೇಲ್ಮನೆಯ ಸದಸ್ಯರ ಮಾತು ಹಾಗೂ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎನ್ನುವುದಕ್ಕೆ ಸಿಂಧನೂರು ಹಳ್ಳದ ಬ್ರಿಡ್ಜ್ನ ದುಸ್ಥಿತಿಯೇ ಜ್ವಲಂತ ಸಾಕ್ಷಿಯಾಗಿದೆ ಎಂದು ಸಂಘಟನೆಯ ಮುಖಂಡರೊಬ್ಬರು ಹೇಳುತ್ತಾರೆ.

ಬ್ರಿಡ್ಜ್ನ ಕೊರಕಲಿನಲ್ಲಿ (ಕುಳಿ) ಬೈಕ್ ಗಾಲಿ ಸಿಲುಕಿದೆ ಅಪಘಾತ ಗ್ಯಾರಂಟಿ !
ಹಳ್ಳದ ಬ್ರಿಡ್ಜ್ನ ಮೇಲಿನ ರಸ್ತೆಯ ಎರಡೂ ಬದಿಗಳಲ್ಲಿ ಡಾಂಬರ್ ಕಿತ್ತುಹೋಗಿ ಅಂದಾಜು ಅರ್ಧ ಫೀಟ್ ಇಲ್ಲವೇ ಅದಕ್ಕೂ ಹೆಚ್ಚು ಕೊರಕಲು ಬಿದ್ದಿದ್ದು, ಈ ಕೊರಕಲಿನಲ್ಲಿ ಸೈಕಲ್ ಮೋಟರ್ನ ಚಕ್ರಗಳು ಸಿಲುಕಿದರೆ, ಅಪಘಾತ ಗ್ಯಾರಂಟಿ. ದಿನವೂ ಈ ಬ್ರಿಡ್ಜ್ ಮೇಲೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ದಿನದಿಂದ ದಿನಕ್ಕೆ ಕೊರಕಲುಗಳು ಹೆಚ್ಚುತ್ತಿದ್ದು, ಅಪಘಾತಗಳು ಸಂಭವಿಸುವ ಮುಂಚೆಯೇ, ತುರ್ತು ಗತಿಯಲ್ಲಿ 150ಎ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು (ಎನ್ಎಚ್ಎಐ), ಲೋಕೋಪಯೋಗಿ ಇಲಾಖೆಯವರು ಹಾಗೂ ಕೆಆರ್ಡಿಎಸ್ಎಲ್ನ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕೆನ್ನುವುದು ವಾಹನ ಚಾಲಕರ ಹಾಗೂ ನಾಗರಿಕರ ಒತ್ತಾಯವಾಗಿದೆ.

